ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಮ್ಮ ಕಲೆಗಳ ವಿಸ್ತಾರಕ್ಕೆ ಬದುಕಿಗೊಂದು ಸಂಸ್ಕೃತಿಯ ವಿಸ್ತಾರ ಅಗತ್ಯವಿದ್ದು, ನಮ್ಮ ನಡುವೆ ಇರುವ ಸಾಂಪ್ರದಾಯಿಕ ಕಲೆ, ಕಸುಬು, ಭಾಷೆ ಹಾಗೂ ಕೌಶಲ್ಯಗಳು ಜೀವಂತ ಸಂಸ್ಕೃತಿಯ ಭಾಗವಾಗಬೇಕಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಕೆ.ಆರ್. ಬಡಿಗೇರ ಹೇಳಿದರು.ವಿಶ್ವಕರ್ಮ ಸಮಾಜ ಬೆಣ್ಣೂರು ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಲಾಪೂರ ಇವರ ಸಹಯೋಗದಲ್ಲಿ ಬೆಣ್ಣೂರು ಗ್ರಾಮದ ದ್ಯಾಮವ್ವನ ಗುಡಿ ಆವರಣದಲ್ಲಿ ಭಾನುವಾರ ನಡೆದ ಪ್ರಥಮ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಡಾ.ವೀರೇಶ ಬಡಿಗೇರ ಅವರು ಬಡಿಗವೃತ್ತಿ: ವೈಜ್ಞಾನಿಕ ಚಿಂತನೆ ಮತ್ತು ತಿಂತಣಿ ಮೌನೇಶ್ವರ ವಚನ ಪುಷ್ಪಾಂಜಲಿ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಸಂದರ್ಭದಲ್ಲಿ ನಾವು ತತ್ವ ಸಂಸ್ಕೃತಿಯಿಂದ ವಸ್ತು ಸಂಸ್ಕೃತಿಯತ್ತ ಆಕರ್ಷಿತರಾಗಿದ್ದೇವೆ. ಹೊರಗಿನ ಜೀವನ, ತತ್ವ ಮತ್ತು ಸಿದ್ಧವಸ್ತುಗಳಿಗೆ ಬಾಯಿ ತೆರೆದುಕೊಂಡು ಬಿಕ್ಷುಕ ಪ್ರವೃತ್ತಿ ನಮ್ಮದಾಗುತ್ತಿದೆ. ಆದರೆ ನಮ್ಮ ಕಲೆ ಮತ್ತು ಕಸುಬುಗಳು ಹಾಗಲ್ಲ. ಅವು ದುಡಿತ, ಶ್ರಮ, ಸ್ವಾಭಿಮಾನ ಹಾಗೂ ತನ್ನದೇ ಆದ ಭಾಷಾ ಕೌಶಲ್ಯ ಹೊಂದಿದ್ದವು. ಅನ್ಯದರ ಅನುಕರಣೆ ಮತ್ತು ನಕಲಾಗುತ್ತಿರುವ ನಮ್ಮ ಜೀವನಧರ್ಮವೇ ಅಸಲಿ ಆಗಿಲ್ಲದಿರುವಾಗ ನಮ್ಮ ಉತ್ಪನ್ನಗಳಾದ ಕಲೆ ಮತ್ತು ಕಸುಬುಗಳು ಹೇಗೆ ಅಸಲಿಯಾಗಿ ಉಳಿಯಲು ಸಾಧ್ಯ. ನಮ್ಮ ಬದುಕಿಗೊಂದು ಸಂಸ್ಕೃತಿ ವಿಸ್ತಾರವಿದ್ದರೆ ನಮ್ಮ ಕಲೆಗಳಿಗೂ ಅದು ವಿಸ್ತಾರವಾಗುತ್ತಿತ್ತು. ಆದರೆ ಅದು ಆಗುತ್ತಿಲ್ಲ, ನಮ್ಮ ನಡುವೆ ಇರುವ ಸಾಂಪ್ರದಾಯಕ ಕಲೆ, ಕಸುಬು, ಭಾಷೆ ಹಾಗೂ ಕೌಶಲ್ಯಗಳನ್ನು ವಸ್ತು ಸಂಸ್ಕೃತಿಯ ಭಾಗವಾಗಿ ವ್ಯಾಖ್ಯಾನಿಸುತ್ತಿದ್ದೇವೆಯೇ ಹೊರತು ಜೀವಂತ ಸಂಸ್ಕೃತಿಯ ಭಾಗವಾಗಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಅವರು ಬಡಿಗವೃತ್ತಿ:ವೈಜ್ಞಾನಿಕ ಚಿಂತನೆ ಮತ್ತು ತಿಂತಣಿ ಮೌನೇಶ್ವರ ವಚನ ಪುಷ್ಪಾಂಜಲಿ ಪುಸ್ತಕಗಳನ್ನು ಇಳಕಲ್ಲ ವಿಶ್ವಕರ್ಮ ಸಮಾಜದ ಹಿರಿಯರಾದ ಗಂಗಣ್ಣ ಬಡಿಗೇರ ಅವರು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತ ಕು.ಅನಿತಾ ಆಚಾರ್, ಕಾರವಾದ ವಿಶ್ವಕರ್ಮ ಪಿ.ಎಂ ಯೋಜನೆಯ ಸಂಚಾಲಕ ಪ್ರಶಾಂತ, ಅಧ್ಯಕ್ಷತೆ ವಹಿಸಿದ್ದ ಶಿರಸಂಗಿಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ.ಪಿ.ಬಿ. ಬಡಿಗೇರ, ಪೂಜಾ ಮಹೋತ್ಸವ ಸಮಿತಿಯ ನಿರ್ದೇಶಕ ಡಾ.ವೀರೇಶ ಬಡಿಗೇರ ಮಾತನಾಡಿದರು.ಕರ್ನಾಟಕ ರಾಜ್ಯ ವಿಶ್ವ ಬ್ರಾಹ್ಮಣ ಮಠಾಧಿಪತಿಗಳು ಹಾಗೂ ಪೀಠಾಧೀಪತಿಗಳ ಒಕ್ಕೂಟ ಅಧ್ಯಕ್ಷ ರಾಮಚಂದ್ರಸ್ವಾಮೀಜಿ ಹಾಗೂ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಗನ್ನಾಥ ಸ್ವಾಮೀಜಿ ಆಶಿರ್ವಚನ ನೀಡಿದದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ನಾಗಲಿಂಗಪ್ಪ ಗಂಗೂರು ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆ ಮೇಲೆ ಬಾಗಲಕೋಟೆ ತಹಸೀಲ್ದಾರ ವಾಸುದೇವಸ್ವಾಮಿ, ಬಾಗಲಕೋಟೆ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರವಿಂದ ಪತ್ತಾರ, ಬಾಗಲಕೋಟೆ ತಾಲೂಕು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ, ಇಳಕಲ್ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವೀರಭದ್ರಪ್ಪ ಹಿಪ್ಪರಗಿ, ವಿದ್ಯಾಗಿರಿ ಕಾಳಿಕಾ ದೇವಸ್ಥಾನ ಅಧ್ಯಕ್ಷ ವಂತರಾವ್ ಮಾದವ ಕಮ್ಮಾರ, ಬೀಳಗಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೂ ಟಂಕಸಾಲಿ, ಗುಳೇದಗುಡ್ಡ ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರಶೇಖರ ಬಡಿಗೇರ, ಬಾಗಲಕೋಟೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ ಪತ್ತಾರ, ಲಕ್ಕುಂಡಿ ಸುಮಲತಾ ಶಿಲ್ಪಿ, ಸಂಚಾಲಕ ಮುತ್ತು ಭಾಸ್ಕರ ಬಡಿಗೇರ, ವ್ಯವಸ್ಥಾಪಕ ಜ್ಞಾನೇಶ್ವರ ಬಡಿಗೇರ, ಕಾಶಿನಾಥ ಪತ್ತಾರ, ಮನೋಹರ ಬಡಿಗೇರ, ಸಿದ್ದಪ್ಪ ಪತ್ತಾರ, ಹಾಗೂ ಸ್ವಾಗತ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಊಟದ ಸಮಿತಿ ಸದಸ್ಯರು ಭಾಗವಹಿಸಿದ್ದರು.ಮುತ್ತು ಬಾಸ್ಕರ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು, ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.
ಭವ್ಯ ಮೆರವಣಿಗೆ: ಪ್ರಥಮ ಪೂಜಾ ಮಹೋತ್ಸವ ನಿಮಿತ್ತ ವಿಶ್ವಕರ್ಮಪ್ರಭುವಿನ ಭಾವಚಿತ್ರ ಮೆರವಣಿಗೆ ಲಕ್ಷ್ಮೀದೇವಿ ಡೊಳ್ಳಿನ ಸಂಘದವರಿಂದ ಡೊಳ್ಳು ವಾದ್ಯದೊಂದಿಗೆ ಮೆರವಣಿಗೆಗೆ ಹನುಮಪ್ಪ ಪತ್ತಾರ ಅವರ ಅಧ್ಯಕ್ಷತೆಯಲ್ಲಿ ಬೆಣ್ಣೂರು ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಲಕ್ಕಪ್ಪ ಹುಂಡೆಕಾರ ಅವರು ಚಾಲನೆ ನೀಡಿದರು. ರಾಚಪ್ಪ ಪಟ್ಟಣದ, ರಾಚಪ್ಪ ಈ ಬೀಳಗಿ, ಸಿದ್ದಪ್ಪ ವಾಲಿಕಾರ, ಎಚ್.ಆರ್. ಮಾಳಿ ಅತಿಥಿಗಳಾಗಿ ಭಾಗವಹಿಸಿದ್ದರು.