ಕನ್ನಡಪ್ರಭ ವಾರ್ತೆ ಬಳ್ಳಾರಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಚಿತ್ರಕಲಾವಿದ ನಾಡೋಜ ವಿ.ಟಿ. ಕಾಳೆ ಅವರು, ಕಲಾವಿದರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಬದುಕು ಸುಧಾರಣೆ ಮಾಡಿಕೊಳ್ಳಬೇಕು. ಕಲಾವಿದರ ನೆರವಿಗೆ ಸರ್ಕಾರವೂ ಮುಂದಾಗಬೇಕು. ಇದಕ್ಕಾಗಿಯೇ ಕ್ರಿಯಾ ಯೋಜನೆ ರೂಪಿಸುವಂತಾಗಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆ ಕಲಾವಿದರ ತವರೂರಾಗಿದೆ. ಈ ಜಿಲ್ಲೆಯಲ್ಲಿರುವಷ್ಟು ಕಲಾವಿದರು ಹಾಗೂ ಕಲಾಪ್ರಕಾರಗಳು ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಕಂಡು ಬರುವುದಿಲ್ಲ. ಆದರೆ, ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಹಾಗೂ ನೆರವಿನ ಕೊರತೆ ಕಂಡು ಬರುತ್ತದೆ. ಕಲಾವಿದ ಉಳಿಯದಿದ್ದರೆ ಕಲೆಗಳು ಉಳಿಯುವುದಿಲ್ಲ. ಹೀಗಾಗಿ ಸರ್ಕಾರ, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಸಹ ಕಲಾವಿದರನ್ನು ಉತ್ತೇಜಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಜಿಲ್ಲೆಯ ಕಲಾವಿದರನ್ನು ಸಂಘಟಿಸುವ ಹಾಗೂ ಅವರ ಬದುಕಿನ ಸುಧಾರಣೆಗೆ ಶ್ರಮಿಸುವ ಉದ್ದೇಶದಿಂದ ಆರಂಭಗೊಂಡಿರುವ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಮೂಲ ಆಶಯದಿಂದ ವಿಮುಖಗೊಳ್ಳದಂತೆ ಜನಪರವಾಗಿ ಕಾರ್ಯ ನಿರ್ವಹಿಸುವಂತಾಗಲಿ. ಸಂಘದ ಚಟುವಟಿಕೆಗಳು ಕಲೆ ಹಾಗೂ ಕಲಾವಿದರ ಉನ್ನತಿಗೆ ಪೂರಕವಾಗಲಿ ಎಂದು ಹಿರಿಯ ಕಲಾವಿದ ವಿ.ಟಿ.ಕಾಳೆ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ ಮಾತನಾಡಿ, ಕಲೆ ಹಾಗೂ ಕಲಾವಿದರನ್ನು ಗೌರವಿಸುವ ಸಂಸ್ಕಾರ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಜಿಲ್ಲೆಯ ಅನೇಕ ಕಲಾವಿದರು ರಾಷ್ಟ್ರಮಟ್ಟದಲ್ಲಿ ಬೆಳೆಯುವಷ್ಟು ಪ್ರತಿಭಾನ್ವಿತರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಮೊದಲಾಗಬೇಕು. ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವಿದ್ದು ಕಲೆಯನ್ನು ಉಳಿಸಿ-ಬೆಳೆಸುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾಳಜಿಯ ಕಾರ್ಯ ಸಂಘ-ಸಂಸ್ಥೆಗಳಿಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಯಲಾಟ ಹಿರಿಯ ಕಲಾವಿದೆ ಸುಜಾತಮ್ಮ, ರಂಗಭೂಮಿಯ ಹಿರಿಯ ಕಲಾವಿದ ರಮೇಶಗೌಡ ಪಾಟೀಲ್, ವೀಣಾ ಆದೋನಿ, ವರಲಕ್ಷ್ಮೀ, ನೃತ್ಯಗುರು ಜಿಲಾನಿಬಾಷಾ, ಹಿರಿಯ ತಬಲಾ ಕಲಾವಿದ ಪಾಂಡುರಂಗಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ ಮುದ್ದಟನೂರು, ಎಂ.ವಿನೋದ್ ಕುಮಾರ್ ಹಾಗೂ ಆಲಂಬಾಷಾ ಕಾರ್ಯಕ್ರಮ ನಿರ್ವಹಿಸಿದರು.