ಗೋಬಿ ಮಂಚೂರಿ, ಕಬಾಬ್‌ ಗೆ ಮತ್ತೆ ಕೃತಕ ಬಣ್ಣ ಬಳಕೆ

KannadaprabhaNewsNetwork | Published : Mar 14, 2025 12:31 AM

ಸಾರಾಂಶ

ಕಬಾಬ್ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವುದನ್ನು ಸರ್ಕಾರ ನಿರ್ಬಂಧಿಸಿದ್ದರೂ ತಾಲೂಕಿನ ಕೆಲವು ಹೋಟೆಲ್‌ಗಳಲ್ಲಿ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಕೃತಕ ಬಣ್ಣ ಬಳಸುವುದನ್ನು ಮುಂದುವರಿಸಿದ್ದು, ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕಬಾಬ್ ಹಾಗೂ ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವುದನ್ನು ಸರ್ಕಾರ ನಿರ್ಬಂಧಿಸಿದ್ದರೂ ತಾಲೂಕಿನ ಕೆಲವು ಹೋಟೆಲ್‌ಗಳಲ್ಲಿ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಕೃತಕ ಬಣ್ಣ ಬಳಸುವುದನ್ನು ಮುಂದುವರಿಸಿದ್ದು, ಪುರಸಭೆ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರದಲ್ಲಿ ಕೃತಕ ಬಣ್ಣ ಬಳಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಆರಂಭದಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಗೋಬಿ ಮಂಚೂರಿ ಮತ್ತು ಕಬಾಬ್ ಅಂಗಡಿಗಳಲ್ಲಿ ಜನರನ್ನು ಆಕರ್ಷಿಸಲು ಹೆಚ್ಚು ಕೆಂಪು ಬಣ್ಣ ಬರುವಂಥ ಮೆಣಸಿನಕಾಯಿ ಬಳಕೆ ಸೇರಿದಂತೆ ವಿವಿಧ ಬಗೆಯಲ್ಲಿ ಪ್ರಯತ್ನ ಮಾಡಿದ್ದರು. ಆದರೆ ಅದು ಜನತೆಯನ್ನು ಆಕರ್ಷಿಸಲು ಫಲಕಾರಿಯಾಗಿರಲಿಲ್ಲ. ಆದರೆ ಈಗ ಸರ್ಕಾರದ ಆದೇಶಕ್ಕೆ ಮನ್ನಣೆ ನೀಡದೆ ಬೀದಿ ಬದಿಯ ಕಬಾಬ್ ಮತ್ತು ಗೋಬಿ ಮಂಚೂರಿ ಅಂಗಡಿಗಳು ಸೇರಿದಂತೆ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗ ಳಲ್ಲಿ ಸಹ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದ ವರ್ಷ ಜೂನ್ ೨೧ ರಂದು ರಾಜ್ಯಾದ್ಯಂತ ಎಲ್ಲಾ ಕಬಾಬ್, ಗೋಬಿ ಮಂಚೂರಿ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆ ಮಾಡುವುದನ್ನು ಸರ್ಕಾರ ನಿಷೇಧಿಸಿತ್ತು. ಆದೇಶ ಮೀರಿ ಕೃತಕ ಬಣ್ಣ ಬಳಸಿದರೆ ೧೦ ಲಕ್ಷದವರೆಗೂ ದಂಡ ಹಾಗೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಕಟ್ಟು ನಿಟ್ಟಿನ ಆದೇಶವನ್ನು ಹೊರಡಿಸಲಾಗಿತ್ತು.

ಆರಂಭದಲ್ಲಿ ಸುಮ್ಮನೆ ಇದ್ದ ಅಂಗಡಿ ಮಾಲೀಕರು ರಾಜಾರೋಷವಾಗಿ ಬಣ್ಣ ಬಳಕೆ ಮಾಡುವುದನ್ನು ಮತ್ತೆ ಮುಂದುವರಿಸಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಕೃತಕ ಬಣ್ಣ ಮಿಶ್ರಣದ ಬಗ್ಗೆ ಕೆಲವರು ಗೊತ್ತಿದ್ದರೂ ಸೇವಿಸುತ್ತಿದ್ದಾರೆ. ಆದರೆ ಕೆಲವು ಅಮಾಯಕರು ಗೊತ್ತಿಲ್ಲದೇ ಬಣ್ಣ ಮಿಶ್ರಿತ ಆಹಾರ ಪದಾರ್ಥಗಳನ್ನು ತಿಂದು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share this article