ಆತ್ಮಭೂಷಣ್‌ಕನ್ನಡಪ್ರಭ ವಾರ್ತೆ ಮಂಗಳೂರು
ಧಾರಾಕಾರ ಮಳೆಗೆ ಕಳೆದ ಎರಡು ವರ್ಷಗಳಿಂದ ಮಂಗಳೂರು ನಗರದ ಹೆಚ್ಚಿನ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಈ ಹಿಂದೆ ಸುರತ್ಕಲ್ ಎನ್‌ಐಟಿಕೆ ಸರ್ವೆ ನಡೆಸಿದರೂ ಅದರ ವರದಿ ಎಲ್ಲೋ ಮೂಲೆಗುಂಪಾಗಿದೆ. ಇದರ ನಡುವೆಯೇ ಈ ಬಾರಿ ಜೂನ್ ಪ್ರಥಮದಲ್ಲೇ ಸುರಿದ ಮಳೆಗೆ ಮಂಗಳೂರು ಮಹಾನಗರ ಮುಳುಗಡೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಡಳಿತ ಕೊನೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊರಟಿದೆ.
ಏನಿದು ಡಿಜಿಟಲ್ ಸರ್ವೇ?:ಮಂಗಳೂರು ಮಹಾನಗರ ವ್ಯಾಪ್ತಿಯ 13 ಕಡೆಗಳಲ್ಲಿ ನಿರಂತರ ಮಳೆಯಾದರೆ ನೆರೆ ಆವರಿಸುತ್ತದೆ. ಪ್ರವಾಹ ಏರ್ಪಟ್ಟು ನಗರವೇ ದ್ವೀಪಸದೃಶ ವಾತಾವರಣ ಉಂಟಾಗುತ್ತದೆ. ಕೆಲವು ಕಡೆಗಳಲ್ಲಿ ಪ್ರವಾಹ ನೀರು ಇಳಿಮುಖವಾಗಲು ಗಂಟೆಗಟ್ಟಲೆ ಸಮಯ ಬೇಕು. ಇಂಥ ಪರಿಸ್ಥಿತಿ ಮುಂದಿನ ಮಳೆಗಾಲದಲ್ಲಿ ಬರಬಾರದು ಎಂಬ ದಿಶೆಯಲ್ಲಿ ಈಗ ಪ್ರವಾಹದಿಂದ ನಗರಕ್ಕೆ ಮುಕ್ತಿ ನೀಡಲು ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಜಿಡಿಟಲ್ ಸರ್ವೆ ಕಾರ್ಯಕ್ಕೆ ಇಳಿದಿದೆ.
75 ವರ್ಷಗಳ ಹಿಂದೆ ಮಂಗಳೂರಲ್ಲಿ ಇದ್ದ ತೋಡು, ರಾಜ ಕಾಲುವೆಗಳು, ಈಗ ಇರುವ ವಸ್ತು ಸ್ಥಿತಿಗಳನ್ನು ಖಾಸಗಿ ಏಜೆನ್ಸಿಯಿಂದ ವಿನ್ಯಾಸದ ವರದಿ ಪಡೆಯಲಿದ್ದಾರೆ. ಇದೇ ವೇಳೆ ರಾಜ ಕಾಲುವೆಗಳ ಒತ್ತುವರಿ ಬಗ್ಗೆಯೂ ಮಾಹಿತಿ ಸಂಗ್ರಹಿಸಲಿದ್ದಾರೆ.
ಮಹಾನಗರ ಪಾಲಿಕೆಯ ಪಂಪ್‌ವೆಲ್, ಅತ್ತಾವರ 6ನೇ ಕ್ರಾಸ್, ಶಿವನಗರ, ಸುಭಾಸ್ ನಗರ, ಜೆಪ್ಪಿನಮೊಗರು, ಅಡ್ಯಾರ್ ಕಣ್ಣೂರು, ಪಡೀಲ್ ರೈಲ್ವೆ ಅಂಡರ್‌ಪಾಸ್, ಕೊಡಿಯಾಲಗುತ್ತು, ಭಗವತಿ ನಗರ, ಎಂಪೇರ್ ಮಾಲ್ ಬಳಿ, ಗುಜರಾತಿ ಶಾಲೆ, ಕೊಟ್ಟಾರಚೌಕಿ ಹಾಗೂ ಮಾಲೇಮಾರ್‌ಗಳಲ್ಲಿ ಅವ್ಯಾಹತ ಮಳೆಗೆ ಕೃತಕ ನೀರು ಆವರಿಸುತ್ತದೆ.
ಪಂಪ್‌ವೆಲ್‌ಗೆ 4 ಕೋಟಿ ರು.
ಶಿವನಗರದಲ್ಲಿ ಶಿಥಿಲಗೊಂಡ ಕಾಲು ಸಂಕಗಳನ್ನು ತೆರವುಗೊಳಿಸಿ ನೀರು ಸರಾಗ ಹರಿಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಚರಂಡಿಯ ಹೂಳೆತ್ತುವ ಕಾರ್ಯವೂ ನಡೆಯಲಿದೆ. ಟಿಎಂಎ ಪೈ ಇಂಟರ್‌ನ್ಯಾಷನಲ್ ಹಾಲ್ ಬಳಿಯ ತೋಡಿಗೆ ಎಂಜಿ. ರಸ್ತೆಯಲ್ಲಿ ಮೋರಿ ತೆಗೆದು ಬಾಕ್ಸ್ ಮಾದರಿಯ ಸೇತುವೆ ರಚಿಸಲು ತೀರ್ಮಾನಿಸಲಾಗಿದೆ. ಸೇತುವೆ ಕಾಮಗಾರಿಗಾಗಿ ಒಂದು ಬದಿ ವಾಹನ ಸಂಚಾರ ನಿಯಂತ್ರಿಸುವಂತೆ ಪೊಲೀಸ್ ಕಮಿಷನರ್‌ಗೆ ಪಾಲಿಕೆ ಅಧಿಕಾರಿಗಳು ಪತ್ರ ಬರೆದು ವಿನಂತಿಸಿದ್ದಾರೆ.
ಮಂಗಳೂರಲ್ಲಿ ಭಾರಿ ಮಳೆಗೆ ಮುಳುಗಡೆಯಾಗುವ ಪ್ರದೇಶಗಳ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಸರ್ವೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಪಾಲಿಕೆ ಆಡಳಿತಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸೂಚನೆ ನೀಡಿದ್ದಾರೆ.
...............
ಪಾಲಿಕೆ ಎಂಜಿನಿಯರ್‌ಗಳು ಹಾಗೂ ಖಾಸಗಿ ಏಜೆನ್ಸಿ ವತಿಯಿಂದ ನಗರದ ಮುಳುಗಡೆ ಪ್ರದೇಶಗಳ ಸರ್ವೆ ಕಾರ್ಯ ನಡೆದು ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆ ಬಳಿಕ ಜಿಲ್ಲಾಡಳಿತ ಜೊತೆ ಚರ್ಚಿಸಿ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.-ರವಿಚಂದ್ರ ನಾಯಕ್, ಆಯುಕ್ತರು, ಮಹಾನಗರ ಪಾಲಿಕೆ