ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿರ್ವಹಣೆಗೆ ಪೊಲೀಸರು ಈಗ ‘ಅಸ್ತ್ರಂ’ ಪ್ರಯೋಗಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿರ್ವಹಣೆಗೆ ಪೊಲೀಸರು ಈಗ ‘ಅಸ್ತ್ರಂ’ ಪ್ರಯೋಗಿಸಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಂಚಾರ ಪೊಲೀಸರು ಹಾಗೂ ರಾಜ್ಯ ಸಾರಿಗೆ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಕಾರ್ಯಕ್ರಮದಲ್ಲಿ ‘ಬೆಂಗಳೂರಿನ ಟ್ರಾಫಿಕ್ ಎಂಜಿನ್’ಗೆ (ಅಸ್ತ್ರಂ ಆ್ಯಪ್) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ತಂತ್ರಜ್ಞಾನ ತುರ್ತುಸೇವೆ ವಾಹನಗಳ (ಆ್ಯಂಬುಲೆನ್ಸ್) ಓಡಾಟ ಹಾಗೂ ಸಂಚಾರ ದಟ್ಟಣೆ ಉಂಟಾದ ಕೂಡಲೇ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿ ಸುಗಮ ಸಂಚಾರಕ್ಕೆ ನೆರವಾಗಲಿದೆ.
ನೆದರ್‌ಲ್ಯಾಂಡ್ ಕಂಪನಿ ನೆರವು: ಸಂಚಾರ ಸಮಸ್ಯೆಗೆ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಅವರು, ಎಐ ತಂತ್ರಜ್ಞಾನವನ್ನು ಸಂಚಾರ ನಿರ್ವಹಣೆಗೂ ಸಹ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೆದರ್‌ಲ್ಯಾಂಡ್ ಮೂಲದ ಆರ್ಕೆಡ್ಸ್ ಕಂಪನಿಯ ಸಹಕಾರದಲ್ಲಿ ಅಸ್ತ್ರಂ (ಆ್ಯಕ್ಷನಬಲ್ ಇಂಟಲಿಜೆನ್ಸಿ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್ಮೆಂಟ್) ಆ್ಯಪ್ ಅನ್ನು ಅಭಿವೃದ್ಧಿಪಡಿಸಿದರು.
ಸಂಚಾರ ನಿರ್ವಹಣೆಗೆ ಆ್ಯಪ್ ಅಭಿೃದ್ಧಿಪಡಿಸುವ ಆರ್ಕಿಡ್ಸ್ ಕಂಪನಿ, ಈಗಾಗಲೇ ಹೈದರಾಬಾದ್ ಪೊಲೀಸರಿಗೆ ಸಹ ಪ್ರತ್ಯೇಕ ಆ್ಯಪ್ ರೂಪಿಸಿದೆ. ಆದರೆ ಎಐ ತಂತ್ರಜ್ಞಾನ ಬಳಕೆ ಮಾತ್ರ ಬೆಂಗಳೂರಿನಲ್ಲಿ ಮಾತ್ರವೇ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ತ್ರಂ ಕಾರ್ಯನಿರ್ವಹಣೆ ಹೇಗೆ?
ಸಂಚಾರ ದಟ್ಟಣೆ ಮಾಹಿತಿ: ತಮ್ಮ ಠಾಣಾ ವ್ಯಾಪ್ತಿಯ ಯಾವ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ಇನ್‌ಸ್ಪೆಕ್ಟರ್‌ಗಳಿಗೆ ಎಚ್ಚರಿಕೆ ಸಂದೇಶ (ಅಲರ್ಟ್ ಮೆಸೇಜ್) ರವಾನಿಸುತ್ತದೆ. ಇದನ್ನು ಈ-ಅಟೆಂಡ್ಸನ್ ಆ್ಯಪ್‌ನ ಜೊತೆ ಸಂಯೋಜಿಸಲಾಗಿದೆ.
ಹಾಗೆ ಜಂಕ್ಷನ್‌ಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಸಹ ನೀಡಲಾಗುತ್ತದೆ. ಹೀಗಾಗಿ ದಟ್ಟಣೆ ಉಂಟಾದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳ ಸುಗಮ ಓಡಾಟಕ್ಕೆ ಕ್ರಮವಹಿಸಲಿದ್ದಾರೆ.
ಡ್ಯಾಶ್ ಬೋರ್ಡ್ ಅವಲೋಕನ: ರಸ್ತೆಯಲ್ಲಿ ಸಂಚಾರ ದಟ್ಟಣೆ, ವಾಹನಗಳ ಸಂಖ್ಯೆ, ಯಾವ ಮಾದರಿಯ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿವೆ, ಹೀಗೆ ಪ್ರತಿ ಮಾಹಿತಿಯನ್ನು ಅವಲೋಕಿಸಿ ಮಾಹಿತಿ ನೀಡುತ್ತದೆ. ಇದರಿಂದ ಪರಿಣಾಮಕಾರಿ ಸಂಚಾರ ನಿರ್ವಹಣೆಗೆ ನೆರವಾಗಲಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ಉಂಟಾಗುವ ದಟ್ಟಣೆ ಬಗ್ಗೆ ಮುನ್ಸೂಚನೆ ಸಹ ನೀಡಲಿದೆ. ಈ ದತ್ತಾಂಶವು ಸೂಕ್ತ ಸಂಚಾರ ಯೋಜನೆ ರೂಪಿಸಲು ಪೊಲೀಸರಿಗೆ ಅನುಕೂಲವಾಗಲಿದೆ.
ಬಿಓಟಿ ಬಳಕೆ ಘಟನಾ ಸ್ಥಳದ ವರದಿ: ರಸ್ತೆಯಲ್ಲಿ ನಡೆಯುವ ಅಪಘಾತ ಅಥವಾ ಯಾವುದೇ ಘಟನೆ ಬಗ್ಗೆ ಗೂಗಲ್ ಮ್ಯಾಪ್ ಅಥವಾ ಇನ್ನಿತರ ಮ್ಯಾಪ್‌ಗಳ ಮೂಲಕ ಮಾಹಿತಿಯನ್ನು ಕೂಡಲೇ ಸಾರ್ವಜನಿಕರಿಗೆ ತಿಳಿಸುತ್ತದೆ. ಸಂಚಾರ ನಿಯಂತ್ರಣ ಕೇಂದ್ರ (ಟಿಎಂಸಿ) ಇವುಗಳ ಮೇಲೆ ನಿಗಾವಹಿಸಲಾಗುತ್ತದೆ.
ಕಾರ್ಯಕ್ರಮಗಳಿಂದ ಸಂಚಾರ ದಟ್ಟಣೆ: ನಗರದ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ಬಗ್ಗೆ ವಿಶ್ಲೇಷಿಸಿ ಅದಕ್ಕೆ ಮುಂದಿನ ದಿನಗಳಲ್ಲಿ ಪರಿಹಾರೋಪಾಯ ಕಂಡುಕೊಳ್ಳಲು ನೆರವು ನೀಡಲಿದೆ.
ಆ್ಯಂಬುಲೆನ್ಸ್ ಆ್ಯಪ್: ನಗರದಲ್ಲಿ ಸಂಚರಿಸುವ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆ್ಯಂಬುಲೆನ್ಸ್‌ಗಳನ್ನು ನೋಂದಾಯಿಸಿಕೊಂಡು ಅವುಗಳು ಎಲ್ಲಿಂದ ಮತ್ತು ಎಲ್ಲಿಗೆ ಹೋಗಬೇಕು ಎಂಬ ಮಾಹಿತಿಯನ್ನು ಪಡೆಯಲಿದೆ.
ಸಂಚಾರ ದಟ್ಟಣೆಯಲ್ಲಿ ಯಾವುದೇ ಆ್ಯಂಬುಲೆನ್ಸ್ ಎರಡು ನಿಮಿಷ ಸಿಲುಕಿದರೆ ಕೂಡಲೇ ಈ ಆ್ಯಪ್ ಮೂಲಕ ಎಸ್‌ಓಎಸ್ ಬಟನ್ ಆ್ಯಕ್ಟಿವೇಟ್ ಆಗಿ ಕ್ಷಣದಲ್ಲಿ ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.
ಡ್ರೋನ್ ಕ್ಯಾಮೆರಾ ಬಳಕೆ: ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪೀಕ್ ಆವರ್‌ಗಳ ಸಂಚಾರ ನಿರ್ವಹಣೆಗೆ 10 ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ. ಇವುಗಳನ್ನು ಟಿಎಂಸಿ ನೇರ ಪ್ರಸಾರದಲ್ಲಿ ವೀಕ್ಷಿಸಿ ಮಾಹಿತಿ ಪಡೆಯಬಹುದು.ಬೈಕ್
ಅಪಘಾತದಿಂದ ಹೆಚ್ಚುಮರಣ: ಸವಾರರು ಹೆಲ್ಮೆಟ್ ಧರಿಸಿ ಎಂದ ಸಿಎಂ ಸಿದ್ಧರಾಮಯ್ಯ
ನಗರದಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ನಿಗಾವಹಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಶನಿವಾರ ಆಯೋಜಿಸಿದ್ದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಮೂರು ವರ್ಷಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್) ಅಮಾನತು ಮಾಡಲಾಗಿದೆ. ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ಬೈಕ್ ಅಪಘಾತಗಳಿಂದ ಅತ್ಯಂತ ಹೆಚ್ಚು ಮರಣಗಳಾಗಿವೆ. ಆದ ಕಾರಣ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಉಪಮುಖ್ಯಮಂತ್ರಿಗಳು ಮನವಿ ಮಾಡಿದರು.
ಜೀವನದಲ್ಲಿ ಧೈರ್ಯ ಇರಬೇಕು, ಆದರೆ ಭಂಡತನ ಇರಬಾರದು. ಜೀವ ಅಮೂಲ್ಯವಾದುದು, ಒಮ್ಮೆ ಹೋದ ಜೀವ ಮತ್ತೆ ಬರುವುದಿಲ್ಲ. ಸಂಚಾರಿ ನಿಯಮ ಪಾಲನೆಯ ಬಗ್ಗೆ ಯುವಪೀಳಿಗೆಗೆ ಮಾರ್ಗದರ್ಶನ ನೀಡಬೇಕಾಗಿದೆ. ಕಾನೂನು ಪಾಲನೆ, ಶಿಸ್ತು, ಸಂಯಮ ಸೇರಿದಂತೆ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಬಾರದು ಎಂದು ಮಕ್ಕಳಲ್ಲಿ ಅರಿವು ಮೂಡಿಸಲು ''''ಮೊಳಕೆಯಲ್ಲೇ ತಿದ್ದಿರಿ'''' ಎನ್ನುವ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಗೃಹ ಮಂತ್ರಿ ಡಾ। ಜಿ.ಪರಮೇಶ್ವರ್ ಮಾತನಾಡಿ, ದೇಶದ ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ತೀರ ಕಡಿಮೆಯಾಗಿದೆ. ಕಮಾಂಡ್ ಸೆಂಟರ್‌ನಲ್ಲಿನ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲಾಗುತ್ತಿದೆ. ಜನರು ಮತ್ತಷ್ಟು ಸುರಕ್ಷಿತವಾಗಿ ಸಂಚರಿಸುವ ದೃಷ್ಟಿಯಿಂದ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.