ಬಸವರಾಜ ಹಿರೇಮಠ
ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪಠ್ಯಕ್ರಮವು ಉನ್ನತ ಶಿಕ್ಷಣ ಮತ್ತು ಉದ್ಯಮದ ಮಧ್ಯೆ ತೀವ್ರ ಅಂತರ ಹೊಂದಿದ್ದು, ಕಾಲಕ್ಕೆ ತಕ್ಕಂತೆ ಪಠ್ಯಕ್ರಮ ಬದಲಾಯಿಸಲು ಶಿಕ್ಷಣ ತಜ್ಞರು ಹಾಗೂ ಕೈಗಾರಿಕೋದ್ಯಮಿಗಳು ಸಾಕಷ್ಟು ಬಾರಿ ಗಮನ ಸೆಳೆದಿದ್ದರು. ಇದಕ್ಕೆ ಪೂರಕವಾಗಿ ಕರ್ನಾಟಕ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳನ್ನು ಹೆಚ್ಚು ಉದ್ಯಮಕ್ಕೆ ಸಿದ್ಧರನ್ನಾಗಿ ಮಾಡಲು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ರಾಜ್ಯದ ಎರಡನೇ ಅತ್ಯಂತ ಹಳೆಯ ವಿವಿ ಎನಿಸಿರುವ ಕವಿವಿ 2026–27ನೇ ಶೈಕ್ಷಣಿಕ ವರ್ಷದಿಂದ ತನ್ನೆಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ವಿಷಯಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕಡ್ಡಾಯ ವಿಷಯವಾಗಿ ಪರಿಚಯಿಸಲು ತೀರ್ಮಾನಿಸಿದೆ. ಈಗಾಗಲೇ, ದೇಶದಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ), ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಂತಹ ರಾಷ್ಟ್ರೀಯ ಸಂಸ್ಥೆಗಳು ವಿಶೇಷ ಬಿಟೆಕ್ ಮತ್ತು ಸ್ನಾತಕೋತ್ತರ ಎಐ, ಎಂಎಲ್, ಡೇಟಾ ಸೈನ್ಸ್ ಕಾರ್ಯಕ್ರಮ ಪರಿಚಯಿಸುತ್ತಿವೆ. ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸಲು ಸರ್ಕಾರಗಳು ''''''''ಎಲ್ಲರಿಗೂ ಯುವಾ ಎಐ'''''''' ನಂತಹ ಉಚಿತ ಎಐ ಸಾಕ್ಷರತಾ ಕೋರ್ಸ್‌ಗಳನ್ನು ಸಹ ನೀಡುತ್ತಿವೆ. ಈ ಕ್ರಮವು ಎಐ ಶಿಕ್ಷಣವನ್ನು ಮೂಲಭೂತ ಹಂತದಿಂದ ಉನ್ನತ ಹಂತಗಳವರೆಗೆ ಒಳಗೊಳ್ಳುವಂತೆ ಮಾಡುತ್ತಿದೆ.ಎಐ ಕಡ್ಡಾಯ ವಿಷಯ:
ಈ ಹಿನ್ನೆಲೆಯಲ್ಲಿ ಕವಿವಿ ವಿದ್ಯಾರ್ಥಿಗಳು ಸಹ ಹೊಸ ತಾಂತ್ರಿಕ ಕಾರ್ಯಕ್ರಮ ಕಲಿಯಬಹುದು ಮತ್ತು ಭವಿಷ್ಯದ ಔದ್ಯೋಗಿಕ ಸವಾಲು ಎದುರಿಸಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಪಠ್ಯಕ್ರಮದಲ್ಲಿ ಎಐ ಸೇರ್ಪಡೆಗೆ ಎಲ್ಲ ಸಿದ್ಧತೆಗಳು ನಡೆದಿವೆ. ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ, ಎಂಎ, ಎಂಕಾಂ ಮತ್ತು ಎಂಎಸ್ಸಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಎಐ ಕೋರ್ಸ್ ಪರಿಚಯಿಸಲಾಗುವುದು. ಈ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ಕೃತಕ ಬುದ್ಧಿಮತ್ತೆಯನ್ನು ಕಡ್ಡಾಯ ವಿಷಯವಾಗಿ ಅಧ್ಯಯನ ಮಾಡಬೇಕಾಗುತ್ತದೆ.ಅಧ್ಯಯನ ಮಂಡಳಿ ರಚನೆ:
ಈ ಯೋಜನೆ ಯಶಸ್ವಿಗೊಳಿಸಲು ವಿಶ್ವವಿದ್ಯಾನಿಲಯವು ಅಧ್ಯಯನ ಮಂಡಳಿ ರಚಿಸಿದ್ದು, ಹೊಸ ಪಠ್ಯಕ್ರಮ ಸಿದ್ಧಪಡಿಸುವ ಕಾರ್ಯವನ್ನು ಮಂಡಳಿಗೆ ವಹಿಸಿದೆ. 2026ರ ಜೂನ್ ವೇಳೆಗೆ ಪಠ್ಯಕ್ರಮ ಪೂರ್ಣಗೊಳಿಸಲು, ಶೈಕ್ಷಣಿಕ ಮಂಡಳಿಯಿಂದ ಅನುಮೋದನೆ ಪಡೆಯಲು ಮತ್ತು ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದ ಅನುಷ್ಠಾನ ಮಾಡಲು ಮಂಡಳಿಗೆ ನಿರ್ದೇಶನ ನೀಡಲಾಗಿದೆ. ಜತೆಗೆ ಕವಿವಿ ಸೈಬರ್ ಭದ್ರತೆಯಲ್ಲಿ ಎಂಎಸ್ಸಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಎಂಎಸ್ಸಿ ಸೇರಿದಂತೆ ಹೊಸ ಸ್ನಾತಕೋತ್ತರ ಕಾರ್ಯಕ್ರಮ ಬರುವ ಶೈಕ್ಷಣಿಕ ವರ್ಷದಿಂದ ಪರಿಚಯಿಸಲು ನಿರ್ಧರಿಸಿದೆ. ಈ ಕೋರ್ಸ್‌ಗಳು ಕ್ಷೇತ್ರ ಭೇಟಿಗಳು ಮತ್ತು ಕಡ್ಡಾಯ ಯೋಜನಾ ಕೆಲಸ ಸೇರಿದಂತೆ ಪ್ರಾಯೋಗಿಕ ಮಾನ್ಯತೆಗೆ ಒತ್ತು ನೀಡುತ್ತವೆ.ಕವಿವಿ ತನ್ನ ಪದವೀಧರರು ವೃತ್ತಿಪರತೆಯಲ್ಲಿ ಸಮರ್ಥರು, ಉದ್ಯಮಕ್ಕೆ ಸಿದ್ಧರಾಗಿದ್ದಾರೆ ಮತ್ತು ತಮ್ಮ ವೃತ್ತಿಜೀವನದಲ್ಲಿ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ವಿಶ್ವಾಸ ಹೊಂದಿದ್ದಾರೆ ಎನ್ನಲು ಕರ್ನಾಟಕ ವಿವಿ ಹೊಸ ಹೆಜ್ಜೆ ಇಟ್ಟಿದ್ದು ಪರಿಣಾಮಗಳನ್ನು ಕಾದು ನೋಡಬೇಕಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆಯು ಎಲ್ಲ ಕ್ಷೇತ್ರಗಳಲ್ಲಿ ಹಾಸುಹೊಕ್ಕಿದ್ದು, ಶಿಕ್ಷಣ ಕ್ಷೇತ್ರ ಸಹ ಹೊರತಾಗಿಲ್ಲ. ಆದ್ದರಿಂದ ಕವಿವಿಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವೃತ್ತಿಪರ ಜಗತ್ತಿಗೆ ತೆರೆದುಕೊಳ್ಳಲು ಪಠ್ಯಕ್ರಮದಲ್ಲಿ ಎಐ ವಿಷಯ ಸೇರ್ಪಡೆ ಮಾಡಲಾಗುತ್ತಿದೆ. ಈಗಿರುವ ನಿಯಮಿತ ವಿಷಯಗಳ ಜತೆಗೆ, ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಎಐ ಕಡ್ಡಾಯ. ಮುಂದಿನ ಶೈಕ್ಷಣಿಕ ವರ್ಷದಿಂದ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಕವಿವಿಗೆ ಸಂಯೋಜಿತ ಎಲ್ಲ ಕಾಲೇಜುಗಳು ಹೊಸ ಎಐ ಪಠ್ಯಕ್ರಮ ಅಳವಡಿಸಲಾಗುವುದು.
ಡಾ. ಎ.ಎಂ. ಖಾನ್, ಕುಲಪತಿ ಕವಿವಿ