ಧಾರವಾಡ: ಕೃತಕ ಬುದ್ಧಿಮತ್ತೆ ಮತ್ತು ಗ್ರಂಥಾಲಯಗಳು ಸಮ್ಮೇಳನದ ಗೋಷ್ಠಿಯಲ್ಲಿ ಬಹು ಚರ್ಚಿತವಾದ ವಿಷಯ. ಗ್ರಂಥಾಲಯದಲ್ಲಿ ಎಐ ಅಳವಡಿಕೆ ಮಾಡಿಕೊಳ್ಳುವುದು ಒಳ್ಳೆಯದು. ಆದರೆ ಇದು ಮನುಷ್ಯನ ಸೃಜನಶೀಲತೆ ಮತ್ತು ಚಿಂತನಾಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಇದರ ಬಳಕೆಯ ಇತಿಮಿತಿ ಅರಿತುಕೊಂಡು ಉಪಯೋಗಿಸಲು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
ರಾಜ್ಯದಲ್ಲಿ ಗ್ರಂಥಪಾಲಕರ ನೇಮಕಾತಿ ನನೆಗುದಿಗೆ ಬಿದ್ದಿದೆ. ಒಂದು ಕಾಲದಲ್ಲಿ ಕವಿವಿ ಗ್ರಂಥಾಲಯದಲ್ಲಿ 35 ಜನ ಗ್ರಂಥಪಾಲಕರು ಸೇವೆ ಸಲ್ಲಿಸಿದ್ದರು. ಅಲ್ಲಿ ಈಗ ಕೇವಲ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯಾದ್ಯಂತ ಇರುವ ಪರಿಸ್ಥಿತಿ. ಸರ್ಕಾರ ರಾಜ್ಯದಲ್ಲಿರುವ ಎಲ್ಲ ಹಂತದ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಂಥಾಲಯ ಮಕ್ಕಳ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಬೇಕು ಎಂದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ನಮ್ಮನ್ನು ಮನುಷ್ಯರನ್ನಾಗಿ ಮಾಡಿದ್ದು ನಮ್ಮ ಗುರುಗಳು. ಗ್ರಂಥಾಲಯ ಮತ್ತು ಗ್ರಂಥಪಾಲಕರು. ಪುಸ್ತಕ ಓದಿದ ಜ್ಞಾನ ನಮ್ಮ ಮನಸ್ಸಿನಲ್ಲಿ ಬಹಳ ದಿನಗಳವರೆಗೆ ಉಳಿಯುತ್ತದೆ. ಮೊಬೈಲ್, ಇಂಟರ್‌ನೆಟ್‌ನಲ್ಲಿ ನೋಡಿದ್ದು ಕ್ಷಣಾರ್ಧದಲ್ಲಿ ಮರೆತುಹೋಗುತ್ತದೆ. ನಮ್ಮ ಗುರುಗಳು ನಮಗೆ ಓದುವ ಅಭಿರುಚಿ ಹೆಚ್ಚಿಸುತ್ತಿದ್ದರು. ಶಾಸಕರ ಅನುದಾನಗಳಲ್ಲಿ ತಾಲೂಕಿನಲ್ಲಿ ಮಾದರಿ ಗ್ರಂಥಾಲಯಗಳು ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬೆಂಗಳೂರು ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಪ್ರೊ. ಪಿ.ವಿ. ಕೊಣ್ಣೂರ ಮಾತನಾಡಿ, ಗ್ರಂಥಾಲಯ ಕ್ಷೇತ್ರದ ಕುಂದುಕೊರತೆಗೆ ನಿವಾರಣೆಗೆ ವಿದ್ಯಾವರ್ಧಕ ಸಂಘ ಕೈಜೋಡಿಸಬೇಕು. ಈ ಹಿಂದೆ ಜರುಗಿದ ಅನೇಕ ಚಳವಳಿ ಆರಂಭವಾಗಿದ್ದು ಧಾರವಾಡದಿಂದ ಹಾಗೂ ಕವಿವ ಸಂಘದಿಂದ. ಆ ದಿಶೆಯಲ್ಲಿ ಈಗ ಗ್ರಂಥಾಲಯ ಸಮಸ್ಯೆ ಕುರಿತು ಧಾರವಾಡದ ವಿದ್ಯಾವರ್ಧಕ ಸಂಘದಿಂದ ಚಳವಳಿ ಆರಂಭವಾಗಲಿ ಎಂದರು.
ಕವಿವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನಾಯಕ ಬಂಕಾಪೂರ ಸಮ್ಮೇಳನದ ಎರಡು ದಿನದ ಸಮಗ್ರ ವರದಿ ಮಂಡಿಸಿದರು. ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಕೃಷ್ಣಾ ಮರಡ್ಡಿ, ಡಾ. ಕೋಟೆಪ್ಪ ಬಿ. ಹಾಗೂ ಡಾ. ಶಿವರಂಜಿನಿ ಮೊಗಲಿ ಅವರನ್ನು ಸನ್ಮಾನಿಸಲಾಯಿತು.
ಸರ್ಕಾರ ಎಲ್ಲ ಹಂತದ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರನ್ನು ತುಂಬಬೇಕು.
ಸಾರ್ವಜನಿಕ ಗ್ರಂಥಾಲಯಗಳನ್ನು ಹೆಚ್ಚು ಬಲಪಡಿಸಬೇಕು.