ಕನ್ನಡಪ್ರಭ ವಾರ್ತೆ ಮದ್ದೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಪಟ್ಟಲದಮ್ಮ ಸೇವಾ ಸಮಿತಿ ಕದಲೂರು ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳದಿಂಗಳನ್ನು ಕುರಿತ ಸ್ವಾಗತ ನೃತ್ಯ, ತಮಟೆ, ನಗಾರಿ ವಾದನ, ಪೂಜೆ, ಪಟ, ರಂಗಕುಣಿತ, ವೀರಗಾಸೆ, ಮೂಡಲಪಾಯ ಯಕ್ಷಗಾನ, ದೇವಿ ಮಹಾತ್ಮೆಯ ಒಂದು ದೃಶ್ಯ, ಜಾನಪದ ಗೀತ ಗಾಯನಗಳು ಮತ್ತು ಕಥೆಗಳ ತುಣುಕು, ಗ್ರಾಮೀಣ ನುಡಿ, ಸೊಗಡು, ಸೋಬಾನೆ ಪದ, ಕೋಲಾಟ, ಜಾನಪದ ಹಾಸ್ಯ, ಜಾದು ಕಾರ್ಯಕ್ರಮ, ಗಾರುಡಿಗೊಂಬೆ, ಕೀಲು ಕುದುರೆ, ಗೊಂಬೆ ಕುಣಿತ, ಹುಲಿವೇಷ ನೃತ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಿ ನೆರೆದಿದ್ದ ಜನರ ಗಮನ ಸೆಳೆದರು.
ಜೊತೆಗೆ ಗ್ರಾಮದ ಬೀದಿಗಳಲ್ಲಿ ವಿವಿಧ ಜನಪದ ಕಲಾಪ್ರಕಾರಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕದಲೂರು ಗ್ರಾಪಂ ವ್ಯಾಪ್ತಿಯ ಮಹಿಳೆಯರಿಗೆ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕರ ಪತ್ನಿ, ಟ್ರಸ್ಟ್‌ನ ಟ್ರಸ್ಟಿ ವಿನುತ ಉದಯ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ಯುವಜನರಿಗೆ ತಿಳಿಸುವ ಹಿನ್ನೆಲೆಯಲ್ಲಿ ಬೆಳದಿಂಗಳಲ್ಲಿ ಹಳ್ಳಿಹಬ್ಬವನ್ನು ಆಯೋಜಿಸಿದೆ ಎಂದರು.ಕಾರ್ಯಕ್ರಮದಲ್ಲಿ ಕಜ್ಜಾಯ, ಅವರೆಕಾಳು ಕೂಟು, ಮುದ್ದೆ, ಅನ್ನ-ಸಾಂಬಾರ್, ಮಸಾಲೆ ವಡೆ, ಮಜ್ಜಿಗೆ ಸೇರಿದಂತೆ ಗ್ರಾಮೀಣ ಸೊಗಡಿನ ಊಟವನ್ನು ತಯಾರಿಸಿ ಉಣಬಡಿಸಿದ್ದು ವಿಶೇಷವಾಗಿತ್ತು.
ಟ್ರಸ್ ವತಿಯಿಂದ ಮದ್ದೂರು ಉತ್ಸವ, ಗಣೇಶೋತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಮುಂದೆಯೂ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಶಾಸಕ ಕೆ.ಎಂ.ಉದಯ್ ಅವರು ತಮ್ಮ ಹುಟ್ಟೂರಿನಲ್ಲಿ ಬೆಳದಿಂಗಳಲ್ಲಿ ಹಳ್ಳಿ ಹಬ್ಬವನ್ನು ಆಯೋಜಿಸುವ ಮೂಲಕ ಜಾನಪದ ಕಲೆ ಉಳಿಸಿ ಬೆಳೆಸುವಲ್ಲಿ ಮುಂದಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.