ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಶುಕ್ರವಾರ ನಡೆದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ, ಶ್ರೀಗುರು ಸಂಸ್ಮರಣೋತ್ಸವ ಹಾಗೂ ನಡೆದ 47ನೇ ರಾಜ್ಯ ಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಾನಪದ ಕಲಾವಿದರ ಬದುಕನ್ನು ಹಸನಗೊಳಿಸಲು ಭೈರವೈಕ್ಯಶ್ರೀಗಳು ಕಳೆದ ನಾಲ್ಕು ದಶಕಗಳ ಹಿಂದೆ ತಮ್ಮ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವಕ್ಕೆ ಶ್ರೀಕ್ಷೇತ್ರದಲ್ಲಿ ರಾಜ್ಯ ಮಟ್ಟದ ಜಾನಪದ ಕಲಾಮೇಳ ಆರಂಭಿಸಿದ್ದರು. ಆ ಪರಂಪರೆಯನ್ನು ಈಗಿನ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮುಂದುವರಿಸುತ್ತಿದ್ದಾರೆ. ಉಳಿದೆಲ್ಲಾ ಮಠಗಳಿಗಿಂತ ಆದಿಚುಂಚನಗಿರಿ ಕ್ಷೇತ್ರ ಮಾದರಿ ಎಂದು ಶ್ಲಾಘಿಸಿದರು.ಶ್ರೀಕ್ಷೇತ್ರದಲ್ಲಿ ರಾಜ್ಯ ಮಟ್ಟದ ಜಾನಪದ ಕಲಾ ಮೇಳ ಆರಂಭಗೊಳ್ಳಲು ಡಾ.ಎಚ್.ಎಲ್.ನಾಗೇಗೌಡರೂ ಸಹ ಕಾರಣಕರ್ತರು. ಐಎಎಸ್ ಅಧಿಕಾರಿಯಾಗಿದ್ದರೂ ಸಹ ಜಾನಪದವನ್ನು ತಮ್ಮ ಬದುಕಿನ ಭಾಗವಾಗಿ ಉಸಿರಾಗಿಸಿಕೊಂಡಿದ್ದರು. ಬಹಳಷ್ಟು ಅಧ್ಯಯನ ನಡೆಸಿ ಜಾನಪದ ಲೋಕವನ್ನು ನಿರ್ಮಿಸುವ ಮೂಲಕ ನಮ್ಮ ನಡುವೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದರು.
ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ಜಾನಪದ ಕಲೆಗಳು ಸಮಾಜ ಹಾಗೂ ಸಂಸ್ಕೃತಿಯ ಮೂಲ ಬೇರಿದ್ದಂತೆ. ಜಾನಪದ ಕಲಾವಿದರು ಕಟ್ಟಿಕೊಟ್ಟಿರುವ ಹಾಡುಗಳು ಬಹಳಷ್ಟು ವಿಜ್ಞಾನಿಗಳ ಮನಸ್ಸನ್ನು ಸಂತೋಷಗೊಳಿಸಿವೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಚೈತನ್ಯಮೂರ್ತಿಗೆ ನಿರ್ಮಲಾನಂದನಾಥ ಶ್ರೀಗಳು ಮತ್ತು ಗಣ್ಯರು ವಿವಿಧ ಬಗೆಯ ಪುಷ್ಪಾಭಿಷೇಕ ಮಾಡಿ ಆರತಿ ಬೆಳಗಿ ಭಕ್ತಿ ನಮನ ಸಮರ್ಪಿಸಿದರು.
ಸಮಾರಂಭದಲ್ಲಿ ಗವಿಪುರ ಗೋಸಾಯಿ ಮಠದ ಪೀಠಾಧ್ಯಕ್ಷ ಶ್ರೀಮಂಜುನಾಥ ಭಾರತಿ ಸ್ವಾಮೀಜಿ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕುಂಬಳಗೂಡು ಶಾಖಾ ಮಠದ ಪ್ರಕಾಶನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ, ಬೆಂಗಳೂರು ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ಚಿಕ್ಕಮಗಳೂರಿನ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ, ಬಿಜಾಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಸಹಸ್ರಾರು ಮಂದಿ ಜಾನಪದ ಕಲಾವಿದರು ಇದ್ದರು.