ಮುಳಗುಂದ: ಇಂದಿನ ದಿನಮಾನಗಳಲ್ಲಿ ನಾಟಕ ಕಂಪನಿ ಬೆಳೆಸುವುದು ಕಲಾವಿದರನ್ನು ಸಾಕುವುದು ತುಂಬಾ ಕಷ್ಟವಾಗಿದೆ. ಈ ವೃತ್ತಿ ರಂಗಭೂಮಿಯಲ್ಲಿ ನಾಟಕ ಕಂಪನಿಗಳು ತುಂಬಾ ಕಷ್ಟದಲ್ಲಿ ನಡೆಯುತ್ತಿವೆ. ಕಲಾವಿದರ ಸಾಕಲು ಮಾಲೀಕರು ನಾನಾ ವೇಷ ಹಾಕಬೇಕಾಗುತ್ತದೆ ಎಂದು ವಿಜಯಪುರದ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಹೇಳಿದರು.
ಪಟ್ಟಣದಲ್ಲಿ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ ೮೭ನೇ ವಾರ್ಷಿಕೋತ್ಸವ ಹಾಗೂ ರಂಗಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಸರ್ಕಸ್ ಕಂಪನಿಗಿಂತ ನಾಟಕ ಕಂಪನಿ ನಡೆಸುವದು ತುಂಬಾ ಕಷ್ಟವಾಗಿದೆ. ನಮ್ಮ ಕಲಾವಿದರ ಪಾವಿತ್ರ್ಯತೆಯನ್ನು ನಾವೇ ಹಾಳು ಮಾಡಿಕೊಂಡಿದ್ದೇವೆ ಎಂದರು.ಖ್ಯಾತ ಹಿರಿಯ ಗಾಯಕ ಪಂ. ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿ, ಕಲಾವಿದರಲ್ಲಿ ಒಗ್ಗಟ್ಟು ಬರಬೇಕು. ಇದರ ಕೊರತೆಯಿಂದ ಅನೇಕ ಕಂಪನಿಗಳು ತಮ್ಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ಮೂಲೆ ಗುಂಪಾಗಿವೆ. ಕಲಾವಿದರನ್ನು ಕಲಾವಿದರೆ ಗೌರವಿಸಬೇಕು. ಕಲಾರಂಗ ಶ್ರೀಮಂತವಾಗಬೇಕು ಎಂದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಮಾತನಾಡಿ, ಇದೊಂದು ಸಂಗೀತ ಸಂಗಮ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಅನೇಕ ನಾಟಕಗಳು ಜನಮನ ಸೂರೆಗೊಂಡಿವೆ. ನಮ್ಮ ಪುಣ್ಯಾಶ್ರಮಕ್ಕೆ ಯಾವುದೇ ಜಾತಿಯಿಲ್ಲ. ಆಶ್ರಮಕ್ಕೆ ಬಂದವರಿಗೆಲ್ಲ ಒಂದೇ ತೆರನಾದ ಊಟವಿರುತ್ತದೆ. ಹೀಗಾಗಿ ನಮ್ಮ ಸಂಘದಲ್ಲಿಯೂ ಕಲಾವಿದರಾಗಲೂ ಯಾವ ಜಾತಿ ಮತದ ಬೇಧವಿಲ್ಲ ಎಂದರು.ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಆಂಧ್ರ ಪ್ರದೇಶದ ಮರಿಸ್ವಾಮಿ ಮದರಿ, ಅಡ್ನೂರಿನ ಕಲ್ಲಿನಾಥ ಶಾಸ್ತ್ರೀ, ಪು.ಬಡ್ನಿಯ ರಾಚಯ್ಯಸ್ವಾಮಿ ಹಿರೇಮಠ, ಕಟಗಿಹಳ್ಳಿಯ ಹುಚ್ಚಯ್ಯಸ್ವಾಮಿ ಕಲ್ಮಠ ಹಾಗೂ ಕೌಜಗೇರಿಯ ಈರಪ್ಪ ಹೂಗಾರ ಅವರಿಗೆ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲಾಲಸಾಬ ಕಣವಿ, ಬಸವರಡ್ಡಿ ಬೆಳ್ಳಿಕೊಪ್ಪ, ಡಾ. ಎಸ್.ಸಿ. ಚವಡಿ, ಎಂ.ಎಫ್. ರೊಟ್ಟಿಗವಾಡ, ಪಾಲಾಕ್ಷಗೌಡ ಪಾಟೀಲ, ಶ್ರೀಧರ ಹೆಗಡೆ, ವಿರುಪಾಕ್ಷಯ್ಯ ಶಾಸ್ತ್ರೀ, ಬಸವಣ್ಣೆಯ್ಯ ಶಾಸ್ತ್ರೀ, ಶಿವಯ್ಯ ಯಳವತ್ತಿ, ಎಫ್.ವಿ. ಮರಿಗೌಡ್ರ, ಪ್ರೇಮಾ ಗುಳೇದಗುಡ್ಡ ಸೇರಿ ಇತರ ನಾಟಕ ಕಂಪನಿಗಳ ಮಾಲಿಕರು ಇದ್ದರು.