ಶೇಷಮೂರ್ತಿ ಅವಧಾನಿ
ಭಾರತೀಯ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸಾ ಪದ್ಧತಿಗಳಿಗೆ ಶತಮಾನಗಳಿಂದ ಜಾಗತಿಕ ಮನ್ನಣೆ ಇರೋದು ತಿಳಿದಿರೋ ವಿಚಾರ.
ಆದರೆ ಮೇಲಿನ ಮೂರೂ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅರುಜೀವ ಆಯುರ್ವೇದ ಆಸ್ಪತ್ರೆ ತೊಗರಿ ಕಣಜ ಕಲಬುರಗಿಯಲ್ಲಿದ್ದು ಅಲ್ಪಾವಧಿಯಲ್ಲೇ ದೇಶ, ವಿದೇಶದವರನ್ನೆಲ್ಲ ತನ್ನತ್ತ ಸೆಳೆಯುತ್ತಿದೆ.ಮಾನವ ಕಲ್ಯಾಣ ಟ್ರಸ್ಟ್‌ನ ಕಲಬುರಗಿ- ಸೇಡಂ ರಸ್ತೆ ಏರ್ಪೋರ್ಟ್ ಹತ್ತಿರದ ಅರುಜೀವ ಆಯುರ್ವೇದ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿಂದ ಪ. ಆಫ್ರಿಕಾದ ಘಾನಾ ದೇಶದ 17 ಮಂದಿ ವೈದ್ಯರು ಹೆಚ್ಚಿನ ತರಬೇತಿಗಾಗಿ ಬಂದು ವಾಸ್ತವ್ಯ ಮಾಡಿ ಯೋಗ, ಆಯುರ್ವೇದ, ನ್ಯಾಚುರೋಪತಿಯಲ್ಲಿ ಹೆಚ್ಚಿನ ತರಬೇತಿ, ಜ್ಞಾನ ಹೊಂದಿ ತಮ್ಮ ದೇಶಕ್ಕೆ ಮರಳಿದ್ದಾರೆ. ಸದ್ದಿಲ್ಲದೆ ನಡೆದಿರುವ ಈ ಬೆಳವಣಿಗೆ ಮತ್ತೊಮ್ಮೆ ಅರುಜೀವ ಆಸ್ಪತ್ರೆಯನ್ನ ಸುದ್ದಿಗೆ ಗ್ರಾಸವಾಗಿಸಿದೆ.
ಪಶ್ಚಿಮ ಆಫ್ರಿಕಾದ ಘಾನಾ ದೇಶದ ನ್ಯಾರಕೋಟೆ ಕಾಲೇಜ್ ಆಫ್ ಹೋಲಿಸ್ಟಿಕ್ ಮೆಡಿಸಿನ್‌ನಿಂದ 17 ಜನ ಕಲಬುರಗಿಯಲ್ಲಿರೋ ಅರುಜೀವ ಆಸ್ಪತ್ರೆಯಲ್ಲಿನ ತಾವು ಕಳೆದ ಅವಧಿಯನ್ನು ಮುಕ್ತವಾಗಿ ಕೊಂಡಾಡಿದ್ದು, ಕಲಬುರಗಿಯ ಊಟೋಪಚಾರ, ಜನರ ವ್ಯವಹಾರ ಮೆಚ್ಚಿಕೊಂಡಿದ್ದಾರೆ.
ಕಲಬುರಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಡುಪುಗಳು, ಪೂಜಾ ಸಾಮಗ್ರಿಗಳು ಹಾಗೂ ಸೂಪರ್ ಮಾರ್ಕೆಟ್‌ನಲ್ಲಿರೋ ಜಾಜಿ ಅಂಗಡಿಯಲ್ಲಿ ಗಿಡಮೂಲಿಕೆಗಳನ್ನು ಖರೀದಿಸಿರುವ ಅನುಭವವನ್ನು ಡಾ. ಎಮಿನಲ್ ಡಾರ್ಕೊ, ಹಂಚಿಕೊಂಡು ಸಂತೋಷಪಟ್ಟರು.
ಡಾ. ಶಲಿನ್ ಭಾರತಿ ನೇತೃತ್ವದಲ್ಲಿ ಅರುಜೀವದಲ್ಲಿ 5 ಪರಿಣಿತ ವೈದ್ಯರು, ಸಹ ಸಿಬ್ಬಂದಿಗಳಿದ್ದು, ಸಿಇಓ ಡಾ. ಕೌಸ್ತುಬ್ ದುಮಲ್ ಉಸ್ತುವಾರಿಯಲ್ಲಿ ಅರುಜೀವ ಆಸ್ಪತ್ರೆ ಉತ್ತಮ ಹೆಸರು ಗಳಿಸುತ್ತಿದೆ.
ಭಾರತೀಯ ಆಯುಷ್ ಇಲಾಖೆಯಿಂದ ವಿದೇಶಗಳಲ್ಲಿ ಆಯುರ್ವೇದ, ಯೋಗ ಪ್ರಚಾರ ಮಾಡುವ ರಾಯಭಾರಿಯಗಿ ಅರುಜೀವ ಆಯ್ಕೆಯಾಗಿದೆ. ಸಮನ್ವಯ ಯೋಜನೆಯಡಿ ನಾವು ವಿದೇಶಗಳ ತಜ್ಞರು, ಕಾಲೇಜುಗಳೊಂದಿಗೆ ವಿನಿಮಯ ಕಾರ್ಯಕ್ರಮ ನಡೆಸುತ್ತಿದ್ದು ಅದರ ಬಾಗವಾಗಿಯೇ ಘಾನಾ ದೇಶದವರು 30 ದಿನ ಬಂದು ತರಬೇತಿ ಪಡೆದಿದ್ದಾರೆ.
---
ಪ್ರೊ. ರ್‍ಯಾಫಲ್, ನ್ಯಾರಕೋಟೆ ಯೂನಿವರ್ಸಿಟಿ, ಘಾನಾ