ಒಂಟಿ ಕಣ್ಣಲ್ಲೇ ರಾಮನ ಮೂರ್ತಿ ಕೆತ್ತಿದ ಅರುಣ್‌ ಯೋಗಿರಾಜ್!

KannadaprabhaNewsNetwork |  
Published : Jan 20, 2024, 02:00 AM ISTUpdated : Jan 20, 2024, 04:34 PM IST
arun yogiraj ram statue

ಸಾರಾಂಶ

ರಾಮನ ವಿಗ್ರಹ ಕೆತ್ತುವ ವೇಳೆ ಅರುಣ್‌ ಯೋಗಿರಾಜ್‌ ಕಣ್ಣಿಗೆ ಬಿದ್ದಿದ್ದ ಕಲ್ಲಿನ ಚೂರಿನಿಂದ ಅವರು 15 ದಿನ ಒಂದೇ ಕಣ್ಣಲ್ಲಿ ಕೆಲಸ ಮಾಡಿದ್ದಾರೆ. ಕಣ್ಣಿನ ಗಾಯದ ಬಗ್ಗೆ ನಮಗೂ ತಿಳಿಸಿರಲಿಲ್ಲ ಎಂಬ ಕುತೂಹಲದ ಸಂಗತಿ ಬಿಚ್ಚಿಟ್ಟ ಬಾಲರಾಮ ಮೂರ್ತಿಯ ಶಿಲ್ಪಿ ಅರುಣ್‌ ಪತ್ನಿ ವಿಜೇತಾ ಭಾವುಕರಾದರು.

ಕನ್ನಡಪ್ರಭ ವಾರ್ತೆ ಮೈಸೂರು

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧವಾಗಿರುವ ಸುಂದರ ರಾಮಲಲ್ಲಾ ವಿಗ್ರಹವನ್ನು ಶಿಲ್ಪಿ ಅರುಣ್ ಯೋಗಿರಾಜ್ ಅವರು ಸುಮಾರು 15 ದಿನಗಳ ಕಾಲ ಒಂಟಿ ಕಣ್ಣಿನಲ್ಲೇ ಕೆತ್ತನೆ ಮಾಡಿದ್ದರಂತೆ!

ರಾಮಲಲ್ಲಾನ ಮೂರ್ತಿ ಕೆತ್ತನೆ ಮಾಡುವ ವೇಳೆ ಕೃಷ್ಣಶಿಲೆಗೆ ಗಾಳಿ ತಾಕಿ ಅದು ಗಟ್ಟಿಯಾಗುತ್ತಾ ಸಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಮೂರ್ತಿ ಕೆತ್ತನೆ ಮಾಡುತ್ತಿದ್ದ ಅರುಣ್ ಯೋಗಿರಾಜ್‌ ಕಣ್ಣಿನ ಗುಡ್ಡೆಗೆ ಕಲ್ಲಿನ ಚೂರುಗಳು ಸಿಡಿದು ಸೇರಿಕೊಂಡಿದ್ದವು. 

ಇದರಿಂದ ಅರುಣ್‌ ರಾಜ್‌ 15 ದಿನ ಒಂಟಿ ಕಣ್ಣನಲ್ಲೇ ಮೂರ್ತಿ ಕೆತ್ತನೆ ಕೆಲಸ ಮುಂದುವರಿಸಿದ್ದರಂತೆ. ಕೊನೆಗೆ ಕಣ್ಣು ನೋವಿನಿಂದ ಬಳಲುತ್ತಿದ್ದ ಅರುಣ್‌ರನ್ನು ಟ್ರಸ್ಟ್‌ನವರೇ ಆಸ್ಪತ್ರೆಗೆ ಕರೆದೊಯ್ದು ತೋರಿಸಿದ್ದಾರೆ. 

ಕಣ್ಣ ಗುಡ್ಡೆ ಸೇರಿಕೊಂಡಿದ್ದ ಕಲ್ಲಿನ ಚೂರು ತೆಗೆಸಿದ್ದಾರೆ. ಆ ಬಳಿಕವೂ ಅರುಣ್‌ ಅವರು ಯಾವುದೇ ವಿಶ್ರಾಂತಿ ಪಡೆಯದೆ ಅವಧಿಯೊಳಗೆ ರಾಮಲಲ್ಲಾನ ಸುಂದರ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಳಿಸಿದ್ದಾರೆ. 

ಈ ಕುರಿತು ಅರುಣ್‌ ಅವರು ಪತ್ನಿಗಾಗಲಿ, ಕುಟುಂಬದವರಿಗಾಗಲಿ ಸಣ್ಣ ಮಾಹಿತಿಯನ್ನೂ ನೀಡಿರಲಿಲ್ಲ. ಅವರ ಜತೆಗಿದ್ದವರು ಹೇಳಿದ ಬಳಿಕವಷ್ಟೇ ಇದೆಸ್ಸ ನನಗೆ ಗೊತ್ತಾಯಿತು ಎಂದು ಪತ್ನಿ ವಿಜೇತಾ ಹೇಳಿಕೊಂಡಿದ್ದಾರೆ.

ಇದನ್ನು ಕೇಳಿ ನಮಗೆ ಗಾಬರಿಯಾಗಿತ್ತು. ಕೊನೆಗೆ ಆಸ್ಪತ್ರೆಯಿಂದ ಬಂದ ಒಂದೆರಡು ದಿನಗಳ ಬಳಿಕ ಅರುಣ್‌ ಅವರೇ ಈ ವಿಚಾರ ನಮ್ಮ ಜತೆಗೆ ಹಂಚಿಕೊಂಡರು ಎಂದು ವಿಜೇತಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಬ್ಬ ಶಿಲ್ಪಿಗೆ ಮೂರ್ತಿ ಕೆತ್ತನೆ ವೇಳೆ ಕೈ, ಕಾಲು, ದೇಹಕ್ಕೆ ತೊಂದರೆ ಆಗುವುದು ಸಾಮಾನ್ಯ. ಆದರೆ ಕಣ್ಣಿಗೆ ತೊಂದರೆ ಆಯಿತು ಎಂದಾಗ ಸಹಜವಾಗಿಯೇ ಗಾಬರಿ ಆಗುತ್ತದೆ ಎಂದು ಆ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ ವಿಜೇತಾ.

ಮೈಸೂರು, ಹೊಯ್ಸಳ ಶೈಲಿ: ರಾಮ ಸೂರ್ಯ ವಂಶಸ್ಥ. ಅದಕ್ಕಾಗಿ ತಲೆ ಮೇಲೆ ಸೂರ್ಯ ಇದೆ. ಪ್ರಭಾವಳಿಯಲ್ಲಿ ಮೈಸೂರು ಶೈಲಿ ಮೂಡಿ ಬಂದಿದೆ. 

ರಾಮನ ಪಾದಗಳು, ಮೈಕಟ್ಟು ಎಲ್ಲಾ 5 ವರ್ಷದ ಬಾಲಕನ ರೀತಿಯೇ ಮಾಡಲಾಗಿದೆ. ಮೂರ್ತಿಯ ಜತೆಗೆ ರಾಮನ ದಶಾವತಾರ ಸುಂದರವಾಗಿ ಮೂಡಿ ಬಂದಿದೆ. 

ಬಲ ಹಸ್ತದಲ್ಲಿ ಬಾಣ ಹಿಡಿಯುವ ಜೊತೆಗೆ ಆಶೀರ್ವಾದ ಮಾಡುವ ರೀತಿ ಮೂರ್ತಿ ಇದೆ. ಆಭರಣಗಳು ಸೇರಿ ಇತರ ಎಲ್ಲಾ ಕೆತ್ತನೆಗಳು ಹೊಯ್ಸಳ ಶೈಲಿಯಲ್ಲಿವೆ. 

ಮೂರ್ತಿಗೆ ಬಿಲ್ಲು ಬಾಣ ತೊಡಿಸುವ ಮೂಲಕ ಇದು ಪರಿಪೂರ್ಣ ಆಗುತ್ತೆ. ಪ್ರಾಣಪ್ರತಿಷ್ಠೆ ವೇಳೆ ನೇತ್ರಬಿಂದು ಮಾಡುತ್ತಾರೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಸಹೋದರ ಸೂರ್ಯಪ್ರಕಾಶ್ ನಾರಾಯಣ್ ತಿಳಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ