ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬಂಟ್ವಾಳದಲ್ಲಿ ಗುರುವಾರ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ಬೆಳಗ್ಗಿನಿಂದಲೇ ಕ್ಷೇತ್ರದ ವಿವಿಧೆಡೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಅಂಗಡಿ- ಮಳಿಗೆ, ಮನೆಗಳಿಗೆ ತೆರಳಿ ಸುಡು ಬಿಸಿಲಲ್ಲೂ ಮತ ಯಾಚನೆ ನಡೆಸಿದರು.ಅಭ್ಯರ್ಥಿ ತಮ್ಮ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಹೂ ಮಾಲೆ ಹಾಕಿ, ಶಾಲು ಹೊದಿಸಿ, ಇನ್ನೂ ಕೆಲವೆಡೆ ಪಟಾಕಿ ಸಿಡಿಸಿ ಬರಮಾಡಿಕೊಂಡರು. ಪದ್ಮರಾಜ್ ಅವರು ಮತ ಯಾಚನೆ ಮಾಡುವಾಗ ಅವರ ಜತೆ ತೆರಳಿ ಅಭ್ಯರ್ಥಿ ವೇಗಕ್ಕೆ ಇನ್ನಷ್ಟು ಬಲ ತುಂಬಿದರು.
ನಿಮ್ಮ ಕಾವಲುಗಾರನಾಗಿ ನಾನಿರುವೆ:ಈ ಸಂದರ್ಭ ಮಾತನಾಡಿದ ಪದ್ಮರಾಜ್ ಪೂಜಾರಿ, ಇದುವರೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಇಂತಹ ಸಾಮಾಜಿಕ ಕೆಲಸವನ್ನು ಮುಂದುವರಿಸುತ್ತೇನೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವನ್ನೂ ನಡೆಸಲಾಗುವುದು. ಸಂಸತ್ ಸದಸ್ಯನಾಗಿ ನಿಮ್ಮ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.
ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಸೋಲಿನ ಸುಳಿವು ಸಿಕ್ಕಿರುವ ಬಿಜೆಪಿ ಅಪಪ್ರಚಾರಕ್ಕೆ ಇಳಿದಿದೆ. ಮನೆಗೆ ಹೋಗಿ ಆಣೆ, ಪ್ರಮಾಣ ಮಾಡಿಸುವ ಕೆಲಸಕ್ಕೂ ಮುಂದಾಗಿದೆ. ಆದರೆ ಜಾಗೃತ ಮತದಾರರು ಇದರ ಬಗ್ಗೆ ಎಚ್ಚರದಿಂದಿದ್ದಾರೆ. ಯೋಜನೆಗಳ ಲಾಭ ಪಡೆದುಕೊಂಡವರು ಕಾಂಗ್ರೆಸ್ ಕಾರ್ಯಕರ್ತರನ್ನು ಖುಷಿಯಿಂದಲೇ ಎದುರುಗೊಳ್ಳಲಿದ್ದಾರೆ ಮತ್ತು ಬೆಂಬಲಿಸಲಿದ್ದಾರೆ ಎಂದು ಪದ್ಮರಾಜ್ ಹೇಳಿದರು.ಗೆಲುವಿಗೆ ನಾಂದಿ ಹಾಡಿ- ರೈ:
ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಬಡವರ ಪರ ಕೆಲಸ ಮಾಡಿದ ಪಕ್ಷ. ಹಾಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ ಎಂದರು.ಧಾರ್ಮಿಕ ಕೇಂದ್ರಗಳಿಗೆ ಭೇಟಿ:
ಬೆಳಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮೊಡಂಕಾಪು ಚರ್ಚ್, ನರಿಕೊಂಬು ಹನುಮಾನ್ ಮಂದಿರ, ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್ ಮತ್ತಿತರರು ಇದ್ದರು.