ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಿ: ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ)

KannadaprabhaNewsNetwork | Published : Dec 9, 2024 12:46 AM

ಸಾರಾಂಶ

ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಹಮ್ಮಿಕೊಂಡು ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ಆತ್ಮ ತೃಪ್ತಿ ತಂದಿದೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು. ಅರಸೀಕೆರೆಯಲ್ಲಿ ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೋಬಳಿ ಮಟ್ಟದ ಕಂದಾಯ ಅದಾಲತ್, ಜನಸಂಪರ್ಕ ಕಾರ್ಯಕ್ರಮ । ಜನರ ಸಮಸ್ಯೆ ಪರಿಹಾರ ತೃಪ್ತಿ ತಂದಿದೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅನೇಕ ವರ್ಷಗಳಿಂದ ಪರಿಹರಿಸಲಾಗದ ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಪರಿಹರಿಸಬೇಕೆಂಬ ಉದ್ದೇಶದಿಂದ ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ಹಮ್ಮಿಕೊಂಡು ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ಆತ್ಮ ತೃಪ್ತಿ ತಂದಿದೆ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ (ಹುಲ್ಲಳ್ಳಿ) ತಿಳಿಸಿದರು.

ತಾಲೂಕಿನ ಜಾವಗಲ್ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಭಾನುವಾರ ನಡೆದ ಹೋಬಳಿ ಮಟ್ಟದ ಕಂದಾಯ ಅದಾಲತ್ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 50-60 ವರ್ಷಗಳಿಂದ ಕಂದಾಯ ಇಲಾಖೆಯ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ, ಈ ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಿ ಹಾಗೂ ನಮ್ಮ ಗ್ರಾಮಗಳಲ್ಲಿ ಅನೇಕ ಜ್ವಲಂತ ಸಮಸ್ಯೆಗಳೆವೆ ಎಂದು ಹಳ್ಳಿ ಹಳ್ಳಿಗಳಿಗೆ ಹೋದಂತಹ ಸಂದರ್ಭದಲ್ಲಿ ರೈತರು, ಸಾರ್ವಜನಿಕರು ಮನವಿ ಮಾಡಿದ ಮೇರೆಗೆ ರೈತರಿಗೆ ಅನುಕೂಲ ಮಾಡಬೇಕೆಂಬ ಆಶಯದೊಂದಿಗೆ ಕ್ಷೇತ್ರದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕಂದಾಯ ಅದಾಲತ್ ಜೊತೆಗೆ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರೈತರು ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಲ್ಲಿ ತಿಳಿಸಿ ಅವುಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ಇತ್ಯರ್ಥವಾಗುವ ಆದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು, ಉಳಿದ ಸಮಸ್ಯೆಗಳಿಗೆ ನಿಗಧಿತ ಅವಧಿಯೊಳಗೆ ಪರಿಹರಿಸಿಕೊಡಲಾಗುವುದು ಎಂದು ಹೇಳಿದರು.

ಜಾವಗಲ್ ಹೋಬಳಿಯು ದೊಡ್ಡ ಹೋಬಳಿಯಾಗಿದ್ದು, 09 ಗ್ರಾಮ ಪಂಚಾಯಿತಿಗಳನ್ನು ಹೊಂದಿರುತ್ತದೆ. ಅತ್ಯಂತ ಹೆಚ್ಚು ಕೃಷಿಕರೇ ವಾಸ ಮಾಡುತ್ತಿರುವ ಜಾವಗಲ್ ಹೋಬಳಿಯಲ್ಲಿ ರೈತರ ಹೆಚ್ಚು ಸಮಸ್ಯೆಗಳಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಜೊತೆ ಜೊತೆಗೆ ಇತರೆ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ದೇಶಕ್ಕೆ ಅನ್ನ ಕೊಡುವ ಅನ್ನದಾತರಾದ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಜಮೀನನ್ನೇ ನಂಬಿ ಜೀವನ ಮಾಡುತ್ತಿರುವ ರೈತರು ಸಮಸ್ಯೆಗಳನ್ನು ಹೊತ್ತು ತಂದ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಅವರ ಸಮಸ್ಯೆಯನ್ನು ಆಲಿಸಿ ಸಮಸ್ಯೆಯನ್ನು ಪರಿಹರಿಸಿಕೊಡಿ. ರೈತರು ಸಮೃದ್ದವಾದರೆ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಅಂಶವನ್ನು ಮನಗಂಡು ಅವರಿಗೆ ಗೌರವಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ತಾಲೂಕಿನ ಎಲ್ಲ ಅಧಿಕಾರಿಗಳು ಕೂಡಾ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದು ತಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ. ತಮಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರ್ಜಿಯಲ್ಲಿ ಬರೆದು ತಿಳಿಸಿ, ನಿಮ್ಮ ಸಮಸ್ಯೆಗಳಿಗೆ ನಿಗದಿತ ದಿನದೊಳಗೆ ಪರಿಹಾರ ಕಲ್ಪಿಸುತ್ತಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ಜಿ.ಸಂತೋಷಕುಮಾರ್, ಬೇಲೂರು ಕ್ಷೇತ್ರದ ಶಾಸಕರಿಗೆ ಕ್ಷೇತ್ರದ ರೈತರ ಬಗ್ಗೆ ಹಾಗೂ ಸಾರ್ವಜನಿಕರ ಬಗ್ಗೆ ಅಪಾರವಾದ ಕಾಳಜಿ ಇದ್ದು, ಅವರ ಆಶಯದಂತೆಯೇ ಜಾವಗಲ್ ಹೋಬಳಿ ಕೇಂದ್ರದಲ್ಲಿ ಕಂದಾಯ ಅದಾಲತ್ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಅವುಗಳನ್ನು ಪರಿಹರಿಸಲು ನಾವು ಸಿದ್ದವಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಸಾರ್ವಜನಿಕರು ಪೌತಿಖಾತೆ, ಪೋಡಿ ದುರಸ್ತಿ, ಪಹಣಿ ಅದಲು ಬದಲು, ಪಿಂಚಣಿ ಹೀಗೆ ಅನೇಕ ಅಹವಾಲುಗಳನ್ನು ಶಾಸಕರ ಸಮ್ಮುಖದಲ್ಲಿ ಪ್ರಸ್ತಾಪಿಸಿದ್ದು, ಆ ಎಲ್ಲ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದು, ಬಂದಂತಹ ಸಾರ್ವಜನಿಕರು ಶಾಸಕರ ಈ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸತೀಶ್, ಜಾವಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರಾ ಧರ್ಮೇಗೌಡ, ಉಪಾಧ್ಯಕ್ಷರಾದ ಶಿವಣ್ಣ, ಕೋಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಯ್ಯ, ಜಾವಗಲ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಪೋಲಿಸ್ ಉಪ ನಿರೀಕ್ಷಕರಾದ ಲತಾ, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಮುಖಂಡರು ಇದ್ದರು.

Share this article