ಅನಂತ್‌ಗೆ ಟಿಕೆಟ್ ಮಿಸ್ ಆಗುತ್ತಿದ್ದಂತೆ ಬರಿದಾದ ಕಾಂಗ್ರೆಸ್ ಬತ್ತಳಿಕೆ

KannadaprabhaNewsNetwork | Published : Mar 31, 2024 2:03 AM

ಸಾರಾಂಶ

ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡುತ್ತಿದ್ದಂತೆ ಕಾಂಗ್ರೆಸ್ ವಿರೋಧಿಗಳ ಬಗ್ಗೆ ಮುಗಿಬೀಳಲು ಬತ್ತಳಿಕೆಯಲ್ಲಿ ಹೊಸ ಅಸ್ತ್ರಕ್ಕಾಗಿ ತಡಕಾಡುವಂತಾಗಿದೆ.

ಕಾರವಾರ: ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡುತ್ತಿದ್ದಂತೆ ಕಾಂಗ್ರೆಸ್ ವಿರೋಧಿಗಳ ಬಗ್ಗೆ ಮುಗಿಬೀಳಲು ಬತ್ತಳಿಕೆಯಲ್ಲಿ ಹೊಸ ಅಸ್ತ್ರಕ್ಕಾಗಿ ತಡಕಾಡುವಂತಾಗಿದೆ.

ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ಸಿಕ್ಕಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದಿಯಾಗಿ ಕಾಂಗ್ರೆಸ್ ಮುಖಂಡರು ರಾಜ್ಯಾದ್ಯಂತ ಅನಂತಕುಮಾರ ಹೆಗಡೆ ಅವರ ಮೇಲೆ ಮುಗಿಬಿದ್ದಿದ್ದಲ್ಲದೆ, ಅನಂತಕುಮಾರ ಹೆಗಡೆ ಅವರನ್ನೇ ಮುಂದಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ತಂತ್ರ ರೂಪಿಸಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕರು ಮಾತ್ರ ಹೆಗಡೆ ಅವರ ಬಗ್ಗೆ ಮೃದು ಧೋರಣೆ ತಾಳಿದ್ದರು.

ಈ ತಂತ್ರದ ಭಾಗವಾಗಿಯೇ ಸಿದ್ದರಾಮಯ್ಯ ವಾಗ್ದಾಳಿ ನಡೆಸುತ್ತ, ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಅನಂತಕುಮಾರ ಹೆಗಡೆ ಅವರ ಮೂಲಕ ಬಿಜೆಪಿ ನಾಯಕರೇ ಈ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. 30 ವರ್ಷಗಳ ಕಾಲ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷ ಹುಟ್ಟಿಸುತ್ತಿದ್ದಾರೆ ಎಂದೆಲ್ಲ ಟೀಕಾಸ್ತ್ರಗಳ ಪ್ರಯೋಗ ಆರಂಭವಾಗಿತ್ತು. ಹೆಗಡೆ ಅವರ ಮೂಲಕ ರಾಜ್ಯದಲ್ಲಿ ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಲು ಯೋಜಿಸಿದ್ದರು. ಕಾಂಗ್ರೆಸ್ ತನ್ನ ಬತ್ತಳಿಕೆ ತುಂಬ ಅನಂತಕುಮಾರ ಹೆಗಡೆ ವಿರುದ್ಧದ ಅಸ್ತ್ರಗಳನ್ನೇ ಭರ್ತಿ ಮಾಡಿಕೊಂಡಿದ್ದರು.

ಆದರೆ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪುತ್ತಿದ್ದಂತೆ ಮೊದಲು ನಿರಾಶರಾದವರು ಅನಂತಕುಮಾರ ಹೆಗಡೆ ಅಷ್ಟೇ ಅಲ್ಲ, ಕಾಂಗ್ರೆಸಿಗರೂ ಹೌದು. ಹೆಗಡೆ ಅವರ ಮೇಲೆ ಮುಗಿಬೀಳಲು ಸಂಗ್ರಹಿಸಿಟ್ಟಿದ್ದ ಎಲ್ಲ ಅಸ್ತ್ರಗಳೂ ನಿಷ್ಪ್ರಯೋಜಕವಾಗಿತ್ತು. ಈಗಲೂ ಹೊಸ ಅಸ್ತ್ರ ಸಿಗದೆ ಅನಂತಕುಮಾರ ಹೆಗಡೆ ಅವರ ವಿರುದ್ಧವೇ ಆಗಾಗ ಒಂದೊಂದು ಅಸ್ತ್ರಗಳನ್ನು ಬಿಡುತ್ತಿದ್ದಾರೆ. ಆದರೆ ಅದು ಗುರಿ ಮುಟ್ಟುವುದೇ ಇಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕಾಗೇರಿ ಅವರ ವೈಯಕ್ತಿಕ ತೇಜೋವಧೆಗಿಳಿದಿದ್ದಾರೆ. ಟೋಪಿ ಧರಿಸಿ ಮುಸ್ಲಿಂ ಸಮಾಜದವರೊಂದಿಗೆ ಇರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಕಾಗೇರಿ ಅವರ ವಿರುದ್ಧವಾಗಿ ಕಂಡರೂ ಇಂತಹ ಪೋಸ್ಟ್‌ಗಳು ಹಿಂದೂ-ಮುಸ್ಲಿಂ ನಡುವೆ ಒಡಕನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ. ಜನಪ್ರತಿನಿಧಿಯಾದವ ಅಥವಾ ಆಗುವವರು ಎಲ್ಲ ಧರ್ಮೀಯರೊಂದಿಗೆ ಹೊಂದಿಕೊಂಡಿದ್ದರೆ ಅದ್ಯಾವ ತಪ್ಪೋ ಎಂದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ನ ಬತ್ತಳಿಕೆ ಬರಿದಾಗಿದ್ದೇ ಇಂತಹ ಅವಾಂತರಗಳಿಗೆಲ್ಲ ಕಾರಣವಾಗಿದೆ.

ಕಾಗೇರಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ ಎಂದು ಟೀಕಿಸಬೇಕು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಕೂಡ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತವರೇ. ಈಗ ಕಾಂಗ್ರೆಸಿಗರು ಕಾಗೇರಿ ವಿರುದ್ಧ ಹೊಸ ಅಸ್ತ್ರಕ್ಕಾಗಿ ಹುಡುಕಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Share this article