ಗುರುತಿಸಿಲ್ಲದ ಗ್ರಾಮಠಾಣಾಗಳೆಷ್ಟು: ಕಂದಾಯ ಸಚಿವರ ಪ್ರಶ್ನೆಗೆ ಅಧಿಕಾರಿಗಳ ನಿರುತ್ತರ..!

KannadaprabhaNewsNetwork | Published : Oct 23, 2024 12:49 AM

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಜನವಸತಿ ಇರುವ ಸಂಖ್ಯೆ ೨೩೯೬ ಎಂದು ನೀಡಿದ್ದೀರಿ. ಇದರ ಜೊತೆಗೆ ಇನ್ನೂ ೪ ಗ್ರಾಮಠಾಣಾಗಳಿರುವ ಬಗ್ಗೆ ಅರ್ಜಿ ಸಲ್ಲಿಕೆಯಾಗಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೀಗೆ ನಿಮ್ಮ ವ್ಯಾಪ್ತಿಯೊಳಗೆ ಕೈಬಿಟ್ಟುಹೋಗಿರಬಹುದಾದ ಗ್ರಾಮಠಾಣಾಗಳು ಎಷ್ಟಿವೆ..?

ಕನ್ನಡಪ್ರಭ ವಾರ್ತೆ ಮಂಡ್ಯ

ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಜನವಸತಿ ಗ್ರಾಮಗಳನ್ನು ಗುರುತಿಸುವ ಸಮಯದಲ್ಲಿ ಬಿಟ್ಟುಹೋಗಿರುವ ಗ್ರಾಮಠಾಣಾಗಳ ಸಂಖ್ಯೆ ಎಷ್ಟು ಎಂಬ ಕಂದಾಯ ಸಚಿವ ಕೃಷ್ಣಭೈರೇಗೌಡರ ಪ್ರಶ್ನೆಗೆ ಅಧಿಕಾರಿಗಳು ನಿರುತ್ತರರಾದರು.

ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಜನವಸತಿ ಇರುವ ಸಂಖ್ಯೆ ೨೩೯೬ ಎಂದು ನೀಡಿದ್ದೀರಿ. ಇದರ ಜೊತೆಗೆ ಇನ್ನೂ ೪ ಗ್ರಾಮಠಾಣಾಗಳಿರುವ ಬಗ್ಗೆ ಅರ್ಜಿ ಸಲ್ಲಿಕೆಯಾಗಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೀಗೆ ನಿಮ್ಮ ವ್ಯಾಪ್ತಿಯೊಳಗೆ ಕೈಬಿಟ್ಟುಹೋಗಿರಬಹುದಾದ ಗ್ರಾಮಠಾಣಾಗಳು ಎಷ್ಟಿವೆ ಎಂದು ಕೇಳಿದಾಗ ಉತ್ತರಿಸಲು ತಡವರಿಸಿದರು.

ಮಂಡ್ಯ ಜಿಲ್ಲೆಯೊಂದೇ ಅಲ್ಲ, ರಾಜ್ಯದಲ್ಲಿ ಪಟ್ಟಿಗೆ ಬಾರದೆ ಹೊರಗುಳಿದಿರುವ ೮೦೦ ಗ್ರಾಮಠಾಣಾಗಳಿವೆ. ಅದಕ್ಕಾಗಿ ಗ್ರಾಮ ಪಂಚಾಯ್ತಿಗಳು ಜನವಸತಿ ಪ್ರದೇಶಗಳನ್ನು ಗುರುತಿಸುವಾಗ ಗ್ರಾಮಗಳು-ಗ್ರಾಮಠಾಣಾಗಳು ಎಂದು ಗುರುತಿಸಿರುತ್ತವೆ. ತಹಸೀಲ್ದಾರ್‌ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಅವುಗಳನ್ನು ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ಇದಲ್ಲದೇ, ಜಲಜೀವನ್ ಮಿಷನ್‌ನಡಿ ಕೊಳಾಯಿ ಸಂಪರ್ಕ ಕಲ್ಪಿಸುವುದಕ್ಕೆ ಗ್ರಾಮಗಳನ್ನು ಗುರುತಿಸುವಾಗಲೂ ಗ್ರಾಮಠಾಣಾಗಳನ್ನು ಗುರುತಿಸಲಾಗಿರುತ್ತದೆ. ಅದನ್ನು ಪರಿಶೀಲಿಸಿ ಕೈಬಿಟ್ಟುಹೋಗಿರುವ ಗ್ರಾಮಗಳನ್ನು ಸೇರಿಸಿಕೊಂಡು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವಂತೆ ಸೂಚಿಸಿದರು.

ಭೂ ಸುರಕ್ಷಾ ಪ್ರಗತಿಯಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನ:

ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳನ್ನು ಸಂರಕ್ಷಿಸಲು ಗಣಕೀಕರಣ ಕಾರ್ಯಕ್ಕೆ ಪಾಂಡವಪುರ ತಾಲೂಕನ್ನು ಪೈಲಟ್ ತಾಲೂಕನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ಫೆಬ್ರವರಿಯಿಂದ ಗಣಕೀಕರಣ ಕಾರ್ಯ ಆಆರಂಭಿಸಲಾಗಿದೆ. ಪ್ರತಿದಿನ ೧೦ ಸಾವಿರದಿಂದ ೧೨ ಸಾವಿರ ಪುಟಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಚಿವರ ಗಮನಕ್ಕೆ ತಂದರು.

ಎಷ್ಟು ಪುಟಗಳನ್ನು ಸೇರಿಸಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂಬ ಸಚಿವರ ಪ್ರಶ್ನೆಗೆ ಅಧಿಕಾರಿಯೊಬ್ಬರು ಉತ್ತರಿಸಿ, ಬೇರೆ ಜಿಲ್ಲೆಗಳಲ್ಲಿ ೩೦ ಪುಟಗಳವರೆಗೆ ಪಿಡಿಎಫ್ ಮಾಡಿ ಅಪ್ಲೋಡ್ ಮಾಡುತ್ತಿದ್ದರೆ, ನಮ್ಮಲ್ಲಿ ೫ ಎಂಬಿಗೆ ಸೀಮಿತವಾಗಿ ೧೨ ರಿಂದ ೧೫ ಪುಟಗಳನ್ನು ಪಿಡಿಎಫ್ ಮಾಡಲಾಗುತ್ತಿದೆ. ೫ ಎಂಬಿ ಮಾಡಿದಾಗ ಮಾತ್ರ ದಾಖಲೆಗಳು ಸ್ಪಷ್ಟ ಚಿತ್ರಣ ಮೂಡುವುದಾಗಿ ತಿಳಿಸಿದರು.

Share this article