ಸಾರಾಂಶ
ಸರ್ಕಾರದ ಬಗ್ಗೆ ಟೀಕಿಸುವ ಪ್ರತಿಪಕ್ಷಗಳಿಗೆ 3-4 ಮಂದಿ ಸಚಿವರು ಬಿಟ್ಟರೆ ಬೇರೆ ಯಾರೂ ಪ್ರತ್ಯುತ್ತರ ನೀಡುತ್ತಿಲ್ಲ. ಆರ್‌ಎಸ್‌ಎಸ್ ಕುರಿತ ನಿಲುವು ಸೇರಿ ಸರ್ಕಾರದ ಎಲ್ಲಾ ನಿಲುವು ಹಾಗೂ ಸಾಧನೆಗಳನ್ನು ಬಲವಾಗಿ ಸಮರ್ಥಿಸಿಕೊಂಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಬೇಕು - ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ‘ರಾಜ್ಯ ಸರ್ಕಾರದ ಬಗ್ಗೆ ವಿನಾಕಾರಣ ಟೀಕಿಸುವ ಪ್ರತಿಪಕ್ಷಗಳಿಗೆ 3-4 ಮಂದಿ ಸಚಿವರು ಬಿಟ್ಟರೆ ಬೇರೆ ಯಾರೂ ಪ್ರತ್ಯುತ್ತರ ನೀಡುತ್ತಿಲ್ಲ. ಆರ್‌ಎಸ್‌ಎಸ್ ಕುರಿತ ನಿಲುವು ಸೇರಿ ಸರ್ಕಾರದ ಎಲ್ಲಾ ನಿಲುವು ಹಾಗೂ ಸಾಧನೆಗಳನ್ನು ಬಲವಾಗಿ ಸಮರ್ಥಿಸಿಕೊಂಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ತಾಕೀತು ಮಾಡಿದ್ದಾರೆ.
ಸಂಪುಟ ಸಹೋದ್ಯೋಗಿಗಳಿಗೆ ಸೋಮವಾರ ಸಂಜೆ ಔತಣಕೂಟ ಏರ್ಪಡಿಸಿದ್ದ ಸಿದ್ದರಾಮಯ್ಯ ಅವರು, ಸರ್ಕಾರವನ್ನು ಸಮರ್ಥಿಸಿಕೊಳ್ಳುವ ವಿಚಾರದಲ್ಲಿ ಸಚಿವರು ತೋರಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ತೀವ್ರ ಕಿಡಿಕಾರಿದರು.
ಪ್ರತಿಪಕ್ಷಗಳ ನಾಯಕರು ನಿರಂತರವಾಗಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನ 10-15 ಮಂದಿ ನಾಯಕರು ನಿತ್ಯ ಟೀಕೆ ಮಾಡುತ್ತಿದ್ದರೂ ಸಚಿವರೇ ಗಟ್ಟಿ ಉತ್ತರ ನೀಡುತ್ತಿಲ್ಲ. ಸಂಪುಟ ಸಚಿವರೇ ಸರ್ಕಾರವನ್ನು ಸಮರ್ಥಿಸಿಕೊಳ್ಳದಿದ್ದರೆ ಹೇಗೆ? 3-4 ಮಂದಿ ಸಚಿವರು ಮಾತ್ರ ಮಾತನಾಡುತ್ತಿದ್ದು, ಉಳಿದವರು ಯಾಕೆ ಮಾತನಾಡುತ್ತಿಲ್ಲ? ಎಂದು ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.
ಕಾರ್ಯವೈಖರಿ ಬದಲಾಗಲಿ:
ಪಕ್ಷವು ಆರ್‌ಎಸ್‌ಎಸ್ ಕುರಿತು ನಿಲುವು ತೆಗೆದುಕೊಂಡಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳ ನಿಷೇಧ ಕುರಿತು ಪರಿಶೀಲಿಸುತ್ತಿದೆ. ಗಣಪತಿ ಪೆಂಡಾಲ್‌ಗೂ ಅನುಮತಿ ಪಡೆಯುವುದು ಕಡ್ಡಾಯ. ಹೀಗಿದ್ದಾಗ ಯಾವುದೇ ಅನುಮತಿ ಇಲ್ಲದೆ ಆರ್‌ಎಸ್‌ಎಸ್ ಕಾರ್ಯಕ್ರಮಗಳು ನಡೆಯುತ್ತಿವೆ. ಇಂತಹ ವಿಚಾರಗಳಲ್ಲಿ ಸರ್ಕಾರದ ನಿಲುವನ್ನು ಕೆಲ ಸಚಿವರು ಮಾತ್ರ ಸಮರ್ಥಿಸಿಕೊಳ್ಳುತ್ತಿದ್ದು, ಉಳಿದವರು ತಮಗೆ ಸಂಬಂಧವಿಲ್ಲ ಎಂಬಂತೆ ಇದ್ದೀರಿ. ಈ ಕಾರ್ಯವೈಖರಿ ಬದಲಾಗಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.
ಇನ್ನು ಸರ್ಕಾರ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಪಂಚ ಗ್ಯಾರಂಟಿ ಮೂಲಕ ದಾಖಲೆಯ ಸಾಧನೆ ಮಾಡಿದೆ. ಜತೆಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪ್ರತಿಪಕ್ಷಗಳ ಶಾಸಕರಿಗೂ ಅನುದಾನ ನೀಡಿದ್ದೇವೆ. ಹೀಗಿದ್ದರೂ ಗ್ಯಾರಂಟಿಗಳು ಅನುಷ್ಠಾನವೇ ಆಗುತ್ತಿಲ್ಲ ಎಂಬಂತೆ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ. ಪ್ರತಿಪಕ್ಷಗಳ ಟೀಕೆಗೆ ಮತ್ತಷ್ಟು ಪರಿಣಾಮಕಾರಿ ಆಗಿ ತಿರುಗೇಟು ನೀಡಬೇಕು ಎಂದು ಒತ್ತಿ ಹೇಳಿದರು ಎಂದು ತಿಳಿದುಬಂದಿದೆ.
ಶಾಸಕರಿಗೆ ಸ್ಪಂದಿಸದಿದ್ದರೆ ಹೇಗೆ?
ಶಾಸಕರಿಗೆ ನೀಡಿರುವ 50 ಕೋಟಿ ರು. ಅನುದಾನ ಸದ್ಬಳಕೆಗೆ ಸಚಿವರು ಸಹಕರಿಸಬೇಕು. ಇನ್ನು ಕೆಲ ಸಚಿವರ ಬಗ್ಗೆ ಪದೇ ಪದೆ ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ನನ್ನ ಬಳಿ ಬಂದು ಸಚಿವರ ಬಗ್ಗೆ ದೂರು ನೀಡುತ್ತಿದ್ದಾರೆ. ಪಕ್ಷದ ಶಾಸಕರಿಗೆ ಸಚಿವರೇ ಸ್ಪಂದಿಸದಿದ್ದರೆ ಹೇಗೆ? ಪಕ್ಷದ ಶಾಸಕರಿಂದ ಯಾವುದೇ ಪತ್ರ, ಮನವಿ ಬಂದರೂ ಸ್ಪಂದಿಸಬೇಕು. ಅಧಿಕಾರದಲ್ಲಿದ್ದಾಗ ಪಕ್ಷದ ಕೆಲಸಗಳು ಮಾಡಿದರೆ ಮಾತ್ರ ಪಕ್ಷಕ್ಕೆ ಭವಿಷ್ಯ ಎಂಬುದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.
ನಾಯಕತ್ವ ಬದಲಾವಣೆಯ ಬಗ್ಗೆ
ಬಹಿರಂಗ ಹೇಳಿಕೆಗೆ ಸಿಎಂ ಬೇಸರ
ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಸಂಬಂಧ ಬಹಿರಂಗ ಹೇಳಿಕೆ ನೀಡುವ ಸಚಿವರ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ಹೊರ ಹಾಕಿರುವುದಾಗಿ ತಿಳಿದುಬಂದಿದೆ.
ಹೈಕಮಾಂಡ್ ಕೊಟ್ಟ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು. ಅಷ್ಟು ಬಾರಿ ಪಕ್ಷ, ರಾಜ್ಯ ಉಸ್ತುವಾರಿಗಳು, ನಾನು ಹಾಗೂ ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದರೂ ಕೆಲವರು ಮಾತನಾಡುತ್ತಿದ್ದಾರೆ. ಇದೆಲ್ಲ ಸರಿಯಲ್ಲ ಎಂದಿದ್ದಾರೆ.