ಸಾರಾಂಶ
ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಬಹುಮತ ಇದ್ರೆ ಆಗೋದು, ಹೈಕಮಾಂಡ್ ಆಶೀರ್ವಾದವೂ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬಾಗಲಕೋಟೆ : ನೋಡಿ ಹೈಕಮಾಂಡ್ ಈಸ್ ಹೈಕಮಾಂಡ್. ಹೈಕಮಾಂಡ್ ಜೊತೆ ಶಾಸಕರ ನಿರ್ಧಾರವೂ ಬೇಕಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂಬ ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಶಾಸಕರ ಬೆಂಬಲ ಇಲ್ಲದೇ ಯಾರೂ ಮುಖ್ಯಮಂತ್ರಿ ಆಗೋಕೆ ಆಗಲ್ಲ. ಬಹುಮತ ಇದ್ರೆ ಆಗೋದು, ಹೈಕಮಾಂಡ್ ಆಶೀರ್ವಾದವೂ ಬೇಕು ಎಂದು ಅವರು ತಿಳಿಸಿದರು.
ಡಿನ್ನರ್ ಪಾರ್ಟಿಗೆ, ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಊಟ ಕೊಡ್ತಾ ಇರುತ್ತೇನೆ. ಊಟದಲ್ಲಿ ಏನೂ ಸ್ಪೆಷಲ್ ಇಲ್ಲ. ತಮಗೆ ಹಾಗೂ ಬಿಜೆಪಿಯವ್ರಿಗೆ ಅದು ಸ್ಪೆಷಲ್ ಎಂದು ನಕ್ಕು ಸುಮ್ಮನಾದ ಸಿಎಂ, ನವೆಂಬರ್ ಕ್ರಾಂತಿ ವಿಚಾರ ಪ್ರಸ್ತಾಪಿಸಿ ಯಾವ ಕ್ರಾಂತಿನೂ ಇಲ್ಲ, ಭ್ರಾಂತಿನೂ ಇಲ್ಲ ಎಂದು ಹೇಳಿದರು.
ಆರ್‌ಎಸ್‌ಎಸ್‌ನವರ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗ ಬಳಸಿಕೊಳ್ಳದಿರುವಂತೆ, ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದ ಬಗ್ಗೆ ಪ್ರಸ್ತಾಪಿಸಿ, ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀಫ್ ಸೆಕ್ರೇಟರಿಗೆ ಸೂಚಿಸಿದ್ದೇನೆ. ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೆ. ಆ ರೀತಿ ಕ್ರಮ ಕೈಗೊಳ್ಳಿ ಎಂದು ಪರಿಶೀಲಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದವರಿಗೆ ಸಚಿವ ಸ್ಥಾನ ಕೊಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಅವರನ್ನು ತೆಗೆದು ಹಾಕಿಲ್ಲ. ಅವರೇ ರಾಜೀನಾಮೆ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಂಪುಟ ಪುನಾರಚನೆ ವೇಳೆ ಅವಕಾಶ ಕೊಡೋಣ ಎಂದ ಅವಕು. ಕೃಷ್ಣಾ ಮೇಲ್ದಂಡೆ ಯೋಜನೆಗೆ ದುಡ್ಡು ತೆಗೆದಿಡುವ ವಿಚಾರಕ್ಕೆ ಯುಕೆಪಿಗೆ ದುಡ್ಡು ಕೊಡಲು ಶುರು ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಚೆನ್ನಾಗಿದೆ. ಚೇತರಿಕೆ ಆಗ್ತಿದೆ. ಸತ್ಯನಾರಾಯಣ ಎಂಬ ವೈದ್ಯರಿಗೆ ಕೇಳಿದೆ. ಎರಡ್ಮೂರು ದಿನಗಳಲ್ಲಿ ಚೇತರಿಕೆ ಆಗ್ತಾರೆ ಎಂದು ಹೇಳಿದ್ದಾರೆ ಎಂದರು.ಶಾಸಕ ಮುನಿರತ್ನ ಮತ್ತು ಡಿಕೆ ಶಿವಕುಮಾರ್ ಅವರ ನಡೆದ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ಬೆಂಗಳೂರು ನಡಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್‌ಬಾಗ್‌ನಂತೆ ಮತ್ತಿಕರೆಯ ಜೆ.ಪಿ.ಪಾರ್ಕ್‌ನಲ್ಲಿಯೂ ಕಾರ್ಯಕ್ರಮವಿತ್ತು. ಶಾಸಕ ಮುನಿರತ್ನ ಅವರು ವೇದಿಕೆಗೆ ಆಗಮಿಸಿ, ತಮ್ಮ ಅಭಿಪ್ರಾಯವನ್ನು ನೀಡಬಹುದಾಗಿತ್ತು. ಆದರೆ ಶಾಸಕರು ತಮ್ಮ ಅಭಿಪ್ರಾಯ ತಿಳಿಸಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನವಿತ್ತೇ ಇಲ್ಲವೇ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಯಾವುದೇ ಮಾಟಮಂತ್ರಗಳಲ್ಲಿ ನಂಬಿಕೆಯಿರಿಸಿಲ್ಲ ಎಂದರು.