ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಖದೀಮರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, 1.26 ಕೋಟಿ ರು. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.

ಬಾಲಾಜಿ ಲೇಔಟ್‌ನ ರಘು ಅಲಿಯಾಸ್ ಪಪ್ಪಿ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ.ಲಿಖಿತ್ ಅಲಿಯಾಸ್ ಕಡ್ಡಿ, ತ್ಯಾಗರಾಜನಗರದ ಮಿಥುನ್‌ ಅಲಿಯಾಸ್ ಮಿಲ್ಕಿ, ಶ್ರೀನಗರದ ಎನ್‌.ಪುನೀತ್‌, ರಘುವನಹಳ್ಳಿಯ ಬಿಸಿಎಸಿ ಲೇಔಟ್ ನಿವಾಸಿ ಪುನೀತ್ ಅಲಿಯಾಸ್ ಹಂದಿ ಬಂಧಿತರಾಗಿದ್ದು, ಆರೋಪಿಗಳಿಂದ 589 ಗ್ರಾಂ ಚಿನ್ನಾಭರಣ, 1.120 ಕೆಜಿ ಬೆಳ್ಳಿ, 1 ಕಾರು, 3 ಬೈಕ್‌ಗಳು ಹಾಗೂ 9.05 ಲಕ್ಷ ರು. ನಗದು ಸೇರಿ 1.26 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ತಮಿಳುನಾಡಿಗೆ ದೇವಾಲಯ ದರ್ಶನಕ್ಕೆ ತೆರಳಿದ್ದಾಗ ಬನಶಂಕರಿ 2ನೇ ಹಂತದಲ್ಲಿರುವ ಗೋಪಿ ರವಿಚಂದ್ರನ್ ಅವರು ಮನೆ ಬೀಗ ಮುರಿದು ದುಷ್ಕರ್ಮಿಗಳು ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ರಘು, ಲಿಖಿತ್, ಪುನೀತ್ ಹಾಗೂ ಮಿಥುನ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುವುದಕ್ಕೆ ಈ ತಂಡ ಕುಖ್ಯಾತಿ ಪಡೆದಿತ್ತು. ಕದ್ದ ಆಭರಣಗಳ ವಿಲೇವಾರಿಯಲ್ಲಿ ಚಿನ್ನಾಭರಣ ವ್ಯಾಪಾರಿ ಶ್ರೀನಗರದ ಪುನೀತ್ ಪ್ರಮುಖ ಪಾತ್ರವಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.