ಬೆಂಗಳೂರು : ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮೇ 15ರೊಳಗೆ ಹೈಕಮಾಂಡ್‌ನಿಂದ ಶುಭ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಶಾಸಕ ಬಂಗಾರಪೇಟೆ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಮಂತ್ರಿ ಸ್ಥಾನ ಕೇಳುವುದು ಶಾಸಕರ ಹಕ್ಕು. ಕೆಲಸ ಮಾಡದ ಮಂತ್ರಿಗಳನ್ನು ಕೈ ಬಿಟ್ಟು ಹೊಸಬರನ್ನು ಸೇರಿಸಬೇಕು. ನಾವು ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದಾಗ ಅವರು ಭರವಸೆ ನೀಡಿದ್ದಾರೆ. ಮೇ 15 ಅಥವಾ ಎರಡನೇ ವಾರದೊಳಗೆ ಹೈಕಮಾಂಡ್‌ನಿಂದ ಸಂಪುಟ ಪುನಾಚರನೆಯ ಶುಭ ಸುದ್ದಿ ಬರುವ ವಿಶ್ವಾಸವಿದೆ ಎಂದರು.

ಸಂಪುಟ ಪುನಾರಚನೆ ಆಗಲೇಬೇಕು:

2028ಕ್ಕೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಸಂಪುಟ ಪುನಾಚರಣೆ ಆಗಲೇಬೇಕು. ಸರ್ಕಾರಕ್ಕೆ ಮೂರು ವರ್ಷ ಆಗಿದೆ. ಈಗ ಸಂಪುಟ ಪುನಾರಚನೆ ಆಗಬೇಕು. ಈಗ ಅವಕಾಶ ನೀಡಿದರೆ ಸಚಿವರಾಗಿ ಕೆಲಸ ಮಾಡಲು ಇನ್ನೊಂದು ವರ್ಷ ಸಮಯ ಸಿಗುತ್ತದೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಖರ್ಗೆ ಅವರನ್ನು ಭೇಟಿ ಮಾಡಿದಾಗ ಒಳ್ಳೆಯ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರ ಸಂಪುಟ ಪುನಾರಚನೆ ಆಗುತ್ತದೆ. ಯಾವ ಸರ್ಕಾರಗಳು ನಮ್ಮ ಜಿಲ್ಲೆಗೆ ಪ್ರಾತಿ‌ನಿಧ್ಯ ಕೊಟ್ಟಿಲ್ಲ. ಹಾಗಾಗಿ ನನಗೂ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂಬ ವಿಶ್ವಾಸವಿದೆ ಎಂದರು.


ಮೇ 15ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹುಟ್ಟುಹಬ್ಬ

ಮೇ 15ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹುಟ್ಟುಹಬ್ಬಕ್ಕೆ ಶುಭ ಸುದ್ದಿ ಸಿಗುತ್ತದೆ ಎಂದು ಅವರ ಆಪ್ತರು ಹೇಳಿಕೆ ನೀಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಸುದ್ದಿ ಸಿಗುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಸಿಎಂ-ಡಿಸಿಎಂ ಒಟ್ಟಾಗಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದಾರೆ. ಹೈಕಮಾಂಡ್ ನಾಯಕತ್ವದ ಬದಲಾವಣೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದೆ, ಸಂಪುಟ ಪುನಾರಚನೆ ಮಾಡಬೇಕು ಎಂದರು.