ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಎಂದು ಕೆಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಆಗಿದ್ದಾರೆ.

ಕುಕನೂರು: ಮೇ 4ರ ನಂತರ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು ಹಾಗೂ ವರಷ್ಠರು ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬದಲಾವಣೆ ಆದರೆ ಒಳ್ಳೆಯದು, ಬದಲಾವಣೆ ಅಗತ್ಯವಿದೆ, ಈಗಿರುವ 25 ಸಚಿವರನ್ನು ಕೈಬಿಟ್ಟು ಹೊಸಬರು, ಹಿರಿಯರಿಗೆ ಅವಕಾಶ ನೀಡಿದರೆ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿ ಎಂದು ಕೆಲ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಆಗಿದ್ದಾರೆ. ಈಗಾಗಲೇ ಸಿಎಂ ಸಹ ಪಕ್ಷದ ವರಿಷ್ಠರನ್ನು ಭೇಟಿ ಆಗಲು ಸೂಚನೆ ನೀಡಿದ್ದಾರೆ ಎಂದರು.

ಶಾಸಕರಾದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನ್ನಿಲ್ಲ. ಮಂತ್ರಿ ಮಾಡ್ತೇನೆ ಅಂದ್ರೇ ನಾನು ಬೇಡ ಅನ್ನಲು ಆಗುತ್ತಾ, ಸಿಎಂ ಆಗುತ್ತೇನೆ ಅಂದ್ರೆ ಬೇಡ ಅನ್ನಲ್ಲ, ಪ್ರಧಾನಿ ಮಂತ್ರಿ ಆಗ್ತೇನೆ ಅಂದ್ರೇ ಬೇಡ ಅನ್ನಲು ಆಗುತ್ತಾ, ಆದರೆ ಆಗಬೇಕಲ್ಲ. ಅದಕ್ಕಾಗಿ ಒಂದು ಚೌಕಟ್ಟು ಇದೆ. ಆ ಚೌಕಟ್ಟಿನಲ್ಲಿ ಮಂತ್ರಿ ಮಾಡುತ್ತಾರೆ. ಮಂತ್ರಿ ಆಗುವವರ ಬಗ್ಗೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಸಿಎಂ ಸೇರಿ 34 ಜನ ಸಚಿವರಿದ್ದಾರೆ. ಅದರಲ್ಲಿ 25 ಜನರನ್ನು ತೆಗೆದು ಹೊಸಬರನ್ನು ಮಂತ್ರಿ ಮಾಡಲಿ, ಎಲ್ಲರಿಗೂ ಅನುಭವ ಬರುತ್ತದೆ. ಇವರೇ ಕೆಲ ಜನ ಕಾಯಂ ಇರಬೇಕು ಅಂದರೆ ಹೇಗೆ ಎಂದರು.

ನನ್ನ ಮಂತ್ರಿ ಮಾಡುವುದು ಪಕ್ಷಕ್ಕೆ ಬಿಟ್ಟಿದ್ದು: ನಾನು ಸಹ ಹಲವು ಸಾರಿ ಗೆದ್ದು ಬಂದಿದ್ದೇನೆ, ಆದ್ರೂ ಮಂತ್ರಿ ಮಾಡಿಲ್ಲ, ನನ್ನನ್ನು ಮಂತ್ರಿ ಮಾಡುವುದು ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು, ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಇದೊಂದು ಸುಮ್ನೇ ಪೋಸ್ಟ್ ಕೊಟ್ಟಿದ್ದಾರೆ. ಸುಮ್ನೇ ಸಿಎಂ ಜತೆ ಒಳ್ಳೆ ಬಜೆಟ್ ಕೊಡುತ್ತೇವೆ. ಆದರೆ ಯಾವುದೇ ಅಧಿಕಾರ ಇಲ್ಲ. ಮಂತ್ರಿ ಆದರೆ ಇಲಾಖೆಯ ಕಾರ್ಯ ಮಾಡಲು ಸಾಧ್ಯ. ಒಳ್ಳೆ ಜನ ಬರಬೇಕು. ಒಳ್ಳೆ ಜನ ಮಂತ್ರಿಗಳಾಗಬೇಕು. ಇನ್ನೂ 2 ವರ್ಷಗಳ ಕಾಲ ಜನರಿಗೆ ಒಳ್ಳೆ ಆಡಳಿತ ನೀಡಬೇಕು ಎಂಬುದು ನನ್ನ ಆಸೆ ಎಂದರು.

ಸಿಎಂ ಮಂತ್ರಿ ಮಂಡಲ ಬದಲಾವಣೆ ಬಗ್ಗೆ ಯಾವುದೇ ಮೀಟಿಂಗ್ ಕರೆದಿಲ್ಲ, ಏ.15ರಂದು ಬಜೆಟ್ ಮಾಡಿದ ಎಲ್ಲ ಅಧಿಕಾರಿಗಳಿಗೆ ಸಾಂಪ್ರದಾಯಕವಾಗಿ ಔತಣಕೂಟ ಸಿಎಂ ಕೊಡುತ್ತಿದ್ದಾರೆ. ಮಂತ್ರಿ ಮಂಡಲಕ್ಕೂ ಅಧಿಕಾರಿಗಳ ಔತಣಕೂಟಕ್ಕೂ ಯಾವುದೇ ಸಂಬಂಧವಿಲ್ಲ. ಮೇ. 4 ನಂತರ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರು, ವರಿಷ್ಠರು ಕುಳಿತುಕೊಂಡು ಬದಲಾವಣೆ ಮಾಡಬೇಕಾದ ಅವಶ್ಯಕತೆ ಇದೆ, ಬದಲಾವಣೆ ಆದರೆ ಒಳ್ಳೆಯದು ಎಂದರು.

ಮಂತ್ರಿ ಆಗುವುದು ಖಚಿತವಲ್ಲವೇ ಎಂಬ ಪ್ರಶ್ನೆಗೆ, ನಾನು ಹೇಗೆ ಹೇಳಲಿ, ಮಂತ್ರಿ ಆದರೂ ಖುಷಿ ಆಗದಿದ್ದರೂ ಖುಷಿ. ಜನರ ಕೆಲಸ ಮಾಡುತ್ತಾ ಇರುತ್ತೇನೆ ಎಂದರು.