ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪಟ್ಟಿ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಪ್ರಾಧಿಕಾರ ಎರಡು ದತ್ತಿ ಬಹುಮಾನ ಸ್ಥಾಪಿಸಿದ್ದು, ಪ್ರತಿ ವರ್ಷ ಇಬ್ಬರು ಚುಟುಕು ಸಾಹಿತಿಗಳಿಗೆ ಈ ದತ್ತಿ ಬಹುಮಾನ ಕೊಡಲು ನಿರ್ಧರಿಸಲಾಗಿದೆ.

ಯಾರ್ಯಾರು ಆಯ್ಕೆ ?

ಸೋಮವಾರ ಈ ಕುರಿತು ಮಾಹಿತಿ ನೀಡಿರುವ ಪ್ರಾಧಿಕಾರದ ಅಧ್ಯಕ್ಷ ಡಾ। ಮಾನಸ ಅವರು, ಅತ್ಯುತ್ತಮ ಪ್ರಕಾಶನ ಪ್ರಶಸ್ತಿ - ಹೊಸಪೇಟೆಯ ಪಲ್ಲವ ಪ್ರಕಾಶನ (ಪ್ರಶಸ್ತಿ ಮೊತ್ತ ₹1 ಲಕ್ಷ ನಗದು), ಡಾ। ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ - ಮೈಸೂರಿನ ಡಾ। ರಾಮೇಗೌಡ (₹75 ಸಾವಿರ ನಗದು), ಡಾ। ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ - ಬೀದರ್‌ನ ಡಾ। ಶ್ರೀ ಚನ್ನವೀರ ಶಿವಾಚಾರ್ಯರು (₹50 ಸಾ. ನಗದು), ಡಾ। ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ - ಮಂಗಳೂರು ಡಾ। ಬಿ.ಶ್ರೀನಿವಾಸ ಕಕ್ಕಿಲಾಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಎರಡು ದತ್ತಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಎರಡು ದತ್ತಿ ಪ್ರಶಸ್ತಿಗಳಲ್ಲಿ ಚುಟುಕು ಯೋಗಾಚಾರ್ಯ ಡಾ। ಎಂ.ಜಿ.ಆರ್.ಅರಸ್ ದತ್ತಿ ಬಹುಮಾನ - ಎ.ಈ. ವೀರಭದ್ರೇಗೌಡ ಆಂದಲೆ (ಚುಟುಕು ಮುಂಗಾರು ಹನಿಗಳು ಕವನ ಸಂಕಲನ) ಮತ್ತು ಡಾ। ಅಂಬಾ ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ - ವಿ.ಸೀತಾಲಕ್ಷ್ಮಿವರ್ಮ (ಬೊಗಸೆಯೊಳಗಿನ ಚುಟುಕು ಸಾಗರ) ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿಯು ತಲಾ ₹6 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.