ಗುರುಗೌರವಾರ್ಪಣಂ ಕಾರ್ಯಕ್ರಮದಲ್ಲಿ ಶಾಸ್ತ್ರಸಂಗೀತವಾರಿಧಿ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಕಾರವಾರ
ವ್ಯಕ್ತಿ ಎಷ್ಟು ವರ್ಷ ಜೀವಿಸಿದರು ಎನ್ನುವುದಕ್ಕಿಂತ ಹೇಗೆ ಬದುಕಿದರು ಎಂಬುದು ಬಹಳ ಮುಖ್ಯ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಜ್ಜನರ ಮತ್ತು ತ್ಯಾಗಿಗಳ ಜೀವನಸಂದೇಶಗಳೇ ಆಧಾರಸ್ತಂಭಗಳಾಗಿರುತ್ತವೆ. ಅಂತಹ ಸಾಧಕರ ಪಂಕ್ತಿಯಲ್ಲಿ ಆಧುನಿಕ ಚಾಣಕ್ಯ ಡಾ. ಗಣಪತಿ ಭಟ್ಟ ಸೇರುತ್ತಾರೆ ಎಂದು ರಾಮಕೃಷ್ಣಾಶ್ರಮದ ಶ್ರೀವಿಜಯಾನಂದ ಸರಸ್ವತಿ ಶ್ರೀಗಳು ಅಭಿಪ್ರಾಯಪಟ್ಟರು.ಅವರು ಈಚೆಗೆ ಧಾರವಾಡದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಶಿಷ್ಯವೃಂದ ಮತ್ತು ಅಭಿಮಾನಿ ಬಳಗದವರು ಹಮ್ಮಿಕೊಂಡ ಗುರುಗೌರವಾರ್ಪಣಂ ಕಾರ್ಯಕ್ರಮದಲ್ಲಿ ಶಾಸ್ತ್ರಸಂಗೀತವಾರಿಧಿ ಪ್ರಶಸ್ತಿ ಪ್ರದಾನ ಮಾಡಿ ಮತ್ತು ವಿವೇಕ ಶತಕಂ ಗ್ರಂಥ ಲೋಕಾರ್ಪಣೆ ಮಾಡಿ, ಕೇವಲ 65 ವರ್ಷಗಳಲ್ಲಿ ಶತಮಾನದ ಸಾಧನೆ ಮಾಡಿದ್ದಾರೆ. ಗ್ರಂಥರಚನೆ, ಸಂಘಟನೆ, ಅಧ್ಯಾಪನ, ಕಲೆಗಳೆಂಬ ಪುರುಷಾರ್ಥ ಚತುಷ್ಟಯಗಳ ಮೂಲಕ ಸರ್ವತೋಮುಖ ಸಮಾಜ ನಿರ್ಮಾಣ ಮಾಡುತ್ತ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ನುಡಿದಂತೆ ನಡೆಯುತ್ತ, ನಗರದಂತೆ ಮತ್ತು ಗ್ರಾಮದಲ್ಲೂ ಸೇವಾಕೈಂಕರ್ಯವನ್ನು ವಿಸ್ತರಿಸುತ್ತ ಆದರ್ಶ ಗುರುವಾಗಿದ್ದಾರೆ ಎಂದರು.
ಗುರುಚರಣಸರೋಜಂ ಎಂಬ ಅಭಿನಂದನ ಗ್ರಂಥವನ್ನು ಬಿಡುಗಡೆ ಮಾಡಿದ ಬಿಜಾಪುರದ ಶಿವಕುಮಾರ ಸ್ವಾಮೀಜಿ, ಶರಣಸಾಹಿತ್ಯನ್ನು ಕಲಿತನಂತರ ಸಂಸ್ಕೃತವನ್ನು ಕಲಿಯಬೇಕೆಂಬ ನಮ್ಮ ಇಚ್ಛೆಯನ್ನು ಗಣಪತಿ ಭಟ್ಟರು ಪೂರೈಸಿದ್ದಾರೆ ಎಂದರು.ಮುಖ್ಯ ವಕ್ತಾರರಾದ ವಿದ್ವಾನ್ ಉಮಾಕಾಂತ ಭಟ್ಟ, ಗಣಪತಿ ಭಟ್ಟ ಗ್ರಾಮಕ್ಕಾಗಿ ಸುಸಂಸ್ಕೃತ ಸೇತುವೆ ನಿರ್ಮಿಸಿದಂತೆ ಧಾರವಾಡವನ್ನು ಮುಖ್ಯಕೇಂದ್ರವನ್ನಾಗಿಸಿಕೊಂಡು ಶಾಸ್ತ್ರ-ಸಂಗೀತಗಳ ಸಮನ್ವಯವೆಂಬ ಸೇತುವೆ ನಿರ್ಮಿಸಿದ್ದಾರೆ. ಆದ್ದರಿಂದ ಅವರಿಗೆ ಪ್ರದಾನ ಮಾಡಿದ ಶಾಸ್ತ್ರಸಂಗೀತವಾರಿಧಿ ಎಂಬ ಪ್ರಶಸ್ತಿ ಸಾರ್ಥಕವಾಗಿದೆ ಎಂದರು.
ಅತಿಥಿಯಾಗಿದ್ದ ರಂಗಕರ್ಮಿ ಶಶಿಧರ ನರೇಂದ್ರ, ಧಾರವಾಡದಲ್ಲಿ ಗಣಪತಿ ಭಟ್ಟರು ಕೈಗೊಂಡ ಅನೇಕ ಚಟುವಟಿಕೆಗಳು ಇಂದಿಗೂ ಮಾದರಿಯಾಗಿವೆ ಎಂದರು.
ನಾಟ್ಯಶತಕಂ ಪುಸ್ತಕ ಲೋಕಾರ್ಪಣೆ ಮಾಡಿದ ನಾಟ್ಯವಿದುಷಿ ರೋಹಿಣಿ ಇಮಾರತಿ, ಇದೊಂದು ಅಸಾಧಾರಣ ಕೆಲಸ. ನಾಟ್ಯಕ್ಷೇತ್ರದವರ ಬಹುದಿನಗಳ ಸಂಕಲ್ಪವನ್ನು ಶುದ್ಧಪುಸ್ತಕದ ಮೂಲಕ ಡಾ. ಗಣಪತಿ ಭಟ್ಟರು ಈಡೇರಿಸಿದ್ದಾರೆ ಎಂದರು.
ಡಾ. ಗಣಪತಿ ಭಟ್ಟ, ಪ್ರತಿಯೊಂದು ಸನ್ಮಾನವೂ ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತದೆ. ಶರೀರಕ್ಕೆ 65 ವಯಸ್ಸಾದರೂ ಮನಸ್ಸಿಗೆ ವಯಸ್ಸು 25 ಇರಬೇಕು. ಸಾಂತೂರು ಗ್ರಾಮದ ವರರುಚಿಸದನವೆಂಬ ಸಿದ್ಧಿಸ್ಥಾನದಲ್ಲಿದ್ದರೂ ಗ್ರಂಥರಚನೆ, ಅಧ್ಯಾಪನ ಕಾರ್ಯ ನಿರಂತರ ನಡೆಯುತ್ತಿದೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಗುರುದಂಪತಿಗಳ ಪಾದಪೂಜೆಯ ಅನಂತರ ಆಬಾಲವೃದ್ಧ ಶಿಷ್ಯರಿಂದ ವೇದಘೋಷ, ಸ್ತೋತ್ರಗಾನ, ಸುಭಾಷಿತ-ಭಗವದ್ಗೀತಾ ಪಠನ, ರಚಿಸಿದ ಸಂಸ್ಕೃತ ಪದ್ಯಗಳ ಗಾನ-ವಾದನ-ನರ್ತನ ಕಾರ್ಯಕ್ರಮ ಜರುಗಿತು.