ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ ಹಾಗೂ ‘ಶಿಫಾರಸು (ಮಿನಿಟ್)’ ಲಾಬಿಗೆ ಕಡಿವಾಣ ಹಾಕಲು ಮುಂದಾಗಿರುವ ಗೃಹ ಇಲಾಖೆ, ವರ್ಗಾವಣೆ ಪಟ್ಟಿಗೆ ಆಖೈರುಗೊಳಿಸುವ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್‌ನ (ಪಿಇಬಿ) ಕಾಯ್ದೆಗೆ ತಿದ್ದುಪಡಿ ತಂದು ಹೊಸ ನೀತಿ ಜಾರಿಗೊಳಿಸಲು ಮುಂದಾಗಿದೆ.
ಮುಂಗಾರು ಅಧಿವೇಶನದಲ್ಲೇ ತಿದ್ದುಪಡಿ ಮಸೂದನೆ ಮಂಡನೆಗೆ ಇಲಾಖೆ ಸಿದ್ಧತೆ ನಡೆಸಿದ್ದು, ಸಬ್ ಇನ್‌ಸ್ಪೆಕ್ಟರ್ ಮೇಲ್ಮಟ್ಟದ ಅಧಿಕಾರಿಗಳಿಗೆ ಎರಡು ವರ್ಷದ ಆಡಳಿತ ಅವಧಿಯನ್ನು ಮತ್ತೆ ಒಂದು ವರ್ಷಕ್ಕೆ ಸೀಮಿತಗೊಳಿಸುವ ಸಾಧ್ಯತೆಗಳಿವೆ. ಈ ವರ್ಗಾವಣೆ ನೀತಿ ಪರಿಷ್ಕರಣೆಗೆ 2028ರಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ದೂರದೃಷ್ಟಿ ಹಾಗೂ ಪೊಲೀಸ್ ವರ್ಗಾವಣೆ ಬಗ್ಗೆ ಇಲಾಖೆಯಲ್ಲಿ ಕೇಳಿ ಬಂದಿರುವ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕಾರಣವಾಗಿವೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ವರ್ಗಾವಣೆ ವ್ಯವಸ್ಥೆ ಸುಧಾರಣೆ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕ ಡಾ। ಎಂ.ಎ.ಸಲೀಂ ಸಮಾಲೋಚನೆ ನಡೆದಿದ್ದು, ಡಿಜಿ-ಐಜಿಪಿ ಅವರಿಗೆ ವರ್ಗಾವಣೆ ಬಗ್ಗೆ ನೀತಿ ನಿರೂಪಣೆ ಜವಾಬ್ದಾರಿಯನ್ನು ಸಚಿವರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ವರ್ಷದಲ್ಲೇ ಬದಲಾವಣೆ?:
ರಾಜ್ಯದಲ್ಲಿ ಅಧಿಕಾರಕ್ಕೇರಿದ ಕೂಡಲೇ ಪೊಲೀಸ್ ವರ್ಗಾವಣೆಗೆ ಹೊಸ ನಿಯಮವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿತ್ತು. ಅಂತೆಯೇ ಪಿಎಸ್‌ಐ, ಪಿಐ ಹಾಗೂ ಡಿವೈಎಸ್ಪಿ-ಎಸಿಪಿಗಳಿಗೆ ಎರಡು ವರ್ಷಗಳ ಆಡಳಿತಾವಧಿಯನ್ನು ನಿಗದಿಪಡಿಸಿ ಪಿಇಬಿ ಕಾಯ್ದೆಯನ್ನು ಸರ್ಕಾರ ಪರಿಷ್ಕರಿಸಿತ್ತು. ಆದರೆ ಒಂದೇ ಕಾರ್ಯಸ್ಥಾನದಲ್ಲಿ (ಠಾಣೆ ಹಾಗೂ ಉಪ ವಿಭಾಗಗಳು) ಎರಡು ವರ್ಷ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿದ್ದು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಇದರಿಂದ ಎಕ್ಸಿಕ್ಯುಟಿವ್ ಹುದ್ದೆ ಪಡೆಯಲು ‘ದರ’ ಪಟ್ಟಿ ದುಪ್ಪಟ್ಟಾಯಿತು ಎಂದು ದೂರುಗಳು ಬಂದಿವೆ.
ಇನ್ನೊಂದೆಡೆ ಎರಡು ವರ್ಷದ ಬದಲು ಒಂದು ವರ್ಷಕ್ಕೆ ಆಡಳಿತ ಅವಧಿ ಸೀಮಿತಗೊಳಿಸುವಂತೆ ಸರ್ಕಾರದ ಮಟ್ಟದಲ್ಲಿ ಕೆಲವು ಅಧಿಕಾರಿಗಳು ಒತ್ತಡ ಹೇರಿದ್ದರು. ಕೊನೆಗೆ ತಾವೇ ಜಾರಿಗೊಳಿಸಿದ್ದ ನೀತಿಯನ್ನು ಮೂರನೇ ವರ್ಷದಲ್ಲಿ ಬದಲಾಯಿಸಲು ಸರ್ಕಾರ ಅಡಿಯಿಟ್ಟಿದೆ ಎಂದು ತಿಳಿದು ಬಂದಿದೆ.
ಪರಿಷ್ಕರಣೆಗೆ ಕಾರಣಗಳೇನು?:
ವರ್ಗಾವಣೆ ನೀತಿ ಪರಿಷ್ಕರಣೆಗೆ ಪ್ರಮುಖವಾಗಿ ಮುಂಬರುವ ವಿಧಾನಸಭಾ ಚುನಾವಣೆ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪ್ರಸುತ್ತ ವರ್ಗಾವಣೆ ನೀತಿ ಮುಂದುವರೆದರೆ ವಿಧಾನಸಭಾ ಚುನಾವಣೆ ಹೊತ್ತಿಗೆ ಪೊಲೀಸರ ಸಾಮಾನ್ಯ ವರ್ಗಾವಣೆ ನಡೆಸುವ ಅವಕಾಶವು ಸರ್ಕಾರದ ಕೈ ತಪ್ಪಲಿದೆ. ಏಕೆಂದರೆ 2026ರ ಮೇ ಅಂತ್ಯದಲ್ಲಿ ಪಿಎಸ್‌ಐ, ಪಿಐ ಹಾಗೂ ಡಿವೈಎಸ್ಪಿಗಳ ವರ್ಗವಾಗಿದ್ದು, ಮುಂದಿನ ವರ್ಗಾವಣೆ ಸಮಯಕ್ಕೆ ವಿಧಾನಸಭಾ ಚುನಾವಣೆ ಎದುರಾಗಲಿದೆ. ಅಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬರಲಿದೆ. ಹೀಗೆ ವರ್ಗಾವಣೆಗೊಂಡಿರುವ ಬಹುತೇಕರು ಒಂದು ಜಿಲ್ಲೆ ಅಥವಾ ಕಮೀಷನರೇಟ್‌ಗಳಲ್ಲಿ ಐದು ವರ್ಷ ಪೂರೈಸಲಿದ್ದಾರೆ. ಆಗ ಒಂದು ಕಾರ್ಯಸ್ಥಾನದಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಪೊಲೀಸರಿಗೆ ಚುನಾವಣಾ ಆಯೋಗ ಎತ್ತಂಗಡಿ ಮಾಡಬಹುದು. ಹೀಗಾಗಿ ಎರಡು ವರ್ಷದ ಬದಲು ಒಂದು ವರ್ಷಕ್ಕೆ ಆಡಳಿತ ಸಮಯ ಇಳಿಸಿದರೆ ಮತ್ತೆ ಸಾಮಾನ್ಯ ವರ್ಗಾವಣೆಗೆ ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.
ಪೊಲೀಸರ ವರ್ಗಾವಣೆ ನೀತಿ ಬದಲಾಗದೆ ಹೋದರೆ ಮುಂದಿನ ವಿಧಾನಸಭಾ ಚುನಾವಣೆಗೆ ಪ್ರತಿಕೂಲ ಪರಿಣಾಮವಾಗಬಹುದು. ಎರಡು ವರ್ಷಗಳ ಅವಧಿಯನ್ನೇ ಮುಂದುವರಿಸಿದರೆ ಚುನಾವಣೆ ಹೊತ್ತಿಗೆ ತಮಗೆ ನಿಷ್ಠ ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಹಾಗೂ ಡಿವೈಎಸ್ಪಿ-ಎಸಿಪಿಗಳ ನಿಯೋಜನೆಗೆ ಅವಕಾಶ ಸಿಗುವುದಿಲ್ಲ ಎಂಬ ಅಭಿಪ್ರಾಯವನ್ನು ಸರ್ಕಾರದ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ವ್ಯವಸ್ಥೆ ಅಮೂಲಾಗ್ರ ಸುಧಾರಣೆಗೆ ಗೃಹ ಇಲಾಖೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಭ್ರಷ್ಟಾಚಾರಕ್ಕೆ ಲಗಾಮು
ಪೊಲೀಸರ ವರ್ಗಾವಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕಳಂಕ ತೊಳೆಯಲು ವರ್ಗಾವಣೆ ಸಂಬಂಧ ಮಾರ್ಗಸೂಚಿ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.
