ಬಳ್ಳಾರಿ: ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಡಿಜಿ ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶಾಂತಿಯುತವಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವುದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ನಾಗರಿಕನಿಗೂ, ವಿದ್ಯಾರ್ಥಿಗಳಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಆ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸುವ ಬದಲು ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ನಿರ್ಲಕ್ಷಿಸಿ ಪೊಲೀಸ್ ಬಲವನ್ನು ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜಿನಾಮೆ ನೀಡಬೇಕು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡಬೇಕು. ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಾಯಗೊಂಡ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಪ್ರತಿಭಟನಾಕಾರರ ಮೇಲಿನ ಎಲ್ಲ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎ.ಮಾನಯ್ಯ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಎಡವಿದೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಯಾವುದೇ ಕಾಳಜಿಯಿಲ್ಲದಂತೆ ವರ್ತಿಸಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದರಿಂದ ಆಘಾತಗೊಂಡ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮಕ್ಕಳ ಸಾವಿಗೆ ಹೊಣೆಯಾರು? ಎಂದು ಪ್ರಶ್ನಿಸಿದರಲ್ಲದೆ, ಕೂಡಲೇ ಕೇಂದ್ರ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.


ಶೋಷಿತ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗಾದಿಲಿಂಗನಗೌಡ, ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನರಸಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗಂಗಪ್ಪ, ಜಿಲ್ಲಾ ಪ್ರಮುಖರಾದ ಬಿ.ರಮೇಶ್, ಎರಿಸ್ವಾಮಿ, ಕೆ.ಎಚ್.ಆಂಜಿನೇಯ, ಎಚ್‌.ಮಲ್ಲಪ್ಪ, ಭೀಮಶಂಕರ್, ಕೃಷ್ಣ ಸಂಗನಕಲ್ಲು ಸೇರಿದಂತೆ ಸಂಘಟನೆಯ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.