ಹಾಲಿನ ದರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೀಟರ್‌ಗೆ 8 ರು. ಹೆಚ್ಚಿಸಿರುವುದು ರಾಜ್ಯೋತ್ಸವ ಮತ್ತು ದೀಪಾವಳಿಗೆ ಕಾಂಗ್ರೆಸ್ ಸರ್ಕಾರದ ಉಡುಗೊರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ದಾವಣಗೆರೆ: ಹಾಲಿನ ದರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೀಟರ್‌ಗೆ 8 ರು. ಹೆಚ್ಚಿಸಿರುವುದು ರಾಜ್ಯೋತ್ಸವ ಮತ್ತು ದೀಪಾವಳಿಗೆ ಕಾಂಗ್ರೆಸ್ ಸರ್ಕಾರದ ಉಡುಗೊರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಶೀಘ್ರದಲ್ಲೇ ಬಸ್ ಟಿಕೆಟ್ ದರವನ್ನೂ ಏರಿಕೆ ಮಾಡಲಿದೆ. ಮುಖ್ಯಮಂತ್ರಿಯವರಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಹೀಗೆ ದರ ಏರಿಸುತ್ತಿರಲಿಲ್ಲ. ರೈತರಿಗೆ ಲೀಟರ್ ಹಾಲಿಗೆ 7 ರು. ನೀಡುವ ವಿಚಾರವನ್ನು ಸ್ವಾಗತಿಸುತ್ತೇವೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ 2 ರು. ಸಹಾಯಧನ ಕೊಟ್ಟಿದ್ದರು. ಆದರೆ ಜನರ ಮೇಲೆ ಭಾರ ಹಾಕಿರಲಿಲ್ಲ. ಆದರೆ, ಆದರೆ, ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಜನರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ದೂರಿದರು.
ಜನರ ಮೇಲೆ ಹೊರ ಹಾಕುವುದು ಸರಿಯಲ್ಲ. 3 ವರ್ಷಗಳಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದರು. ಮದ್ಯದ ದರ ಹೆಚ್ಚಿಸಿದರು. ಆಸ್ಪತ್ರೆಯಲ್ಲೂ ವೆಚ್ಚ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಪಾರ್ಕಿಂಗ್‌ಗೂ ದರ ನಿಗದಿಪಡಿಸಿದ್ದಾರೆ. ಗಾಳಿ ಬಿಟ್ಟು ಉಳಿದೆಲ್ಲಾ ವಸ್ತುಗಳ ಮೇಲೆ ಬೆಲೆ ಏರಿಸಲಾಗಿದೆ. ಜನಸಾಮಾನ್ಯರ ಮೇಲೆ ಬರೆ ಎಳೆಯುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ನಿಲ್ಲಿಸಲಿ. ರೈತರಿಗೆ ನೀಡುವ ಪ್ರೋತ್ಸಾಹಧನವನ್ನು ಜನರ ಮೇಲೆ ಬರೆ ಎಳೆಯುವ ಬದಲಿಗೆ, ಸರ್ಕಾರವೇ ಭರಿಸಲಿ ಎಂದು ಸಲಹೆ ನೀಡಿದರು.
ಕೈ ಸರ್ಕಾರದಲ್ಲಿ 4ನೇ ಬಾರಿ ಹಾಲು ದರ ಏರಿಕೆ:
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಾಲ್ಕು ಬಾರಿ ಹಾಲಿನ ಬೆಲೆ ಏರಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿದ್ದಾಗ ಮೂರು ಬಾರಿ ಏರಿಕೆ ಮಾಡಿದ್ದರು. ಇದೀಗ ಡಿ.ಕೆ.ಶಿವಕುಮಾರ ಬೆಲೆ ಏರಿಕೆ ಮಾಡಿದ್ದಾರೆ. ಅದರಲ್ಲೂ ನೇರವಾಗಿ 8 ರು. ಬೆಲೆ ಏರಿಸಿದ್ದಾರೆ. ಇದು ಗ್ರಾಹಕರಿಗೆ ಹೊರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿದ್ದಾರೆ. ಇದೇ ವೇಳೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಕುರಿತು ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆ ಆಧಾರದ ಮೇಲೆ ಬೆಲೆ ಏರಿಕೆಯಾಗುತ್ತಿದೆ ಎಂದರಲ್ಲದೇ, ಹಾಲಿನ ಉತ್ಪಾದನೆ ಕರ್ನಾಟಕದಲ್ಲೇ ನಡೆಯುತ್ತದೆ ಎಂದರು.
ಹಾಲು ದರ ಏರಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ:
ನಂದಿನಿ ಹಾಲು ಹಾಗೂ ಕ್ಷೀರೋತ್ಪನ್ನಗಳ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ.
ಧಾರವಾಡದ ವಿವೇಕಾನಂದ ವೃತ್ತದಲ್ಲಿ ಎಸ್‌ಯುಸಿಐಯಿಂದ ಪ್ರತಿಭಟನೆ ನಡೆದರೆ, ಗದಗದ ಗಾಂಧಿ ವೃತ್ತ, ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ಹೊರಹಾಕಿದರು. ಬೀದರ್‌ನಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಸರ್ಕಾರ ರೈತರಿಗೇ 8 ರು. ಕೊಡಬೇಕೆಂದು ಒತ್ತಾಯಿಸಿದರು.
ಚಾಮರಾಜನಗರದಲ್ಲಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು. ದಾವಣಗೆರೆಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದಿಂದ ಹೋರಾಟ ನಡೆಯಿತು. ಯಾದಗಿರಿಯಲ್ಲಿ ಎಐಯುಟಿಯುಸಿ ಹೇಳಿಕೆ ಬಿಡುಗಡೆ ಮಾಡಿ ಹಾಲು ದರ ಏರಿಕೆ ಕ್ರಮವನ್ನು ವಿರೋಧಿಸಿತು. ಮಿಕ್ಕಂತೆ ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಯುವ ಮೋರ್ಚಾ ವತಿಯಿಂದ ಹೋರಾಟ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹೊಮ್ಮಿತು.


