ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಘಟನೆ ನಡೆದಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ದೊಡ್ಡ ಹೊಡೆತವಾಗಿದೆ.
ಬಳ್ಳಾರಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ದೈಹಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಘಟನೆ ನಡೆದಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ದೊಡ್ಡ ಹೊಡೆತವಾಗಿದೆ. ಈ ಪ್ರಕರಣದ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ನ್ಯಾಯಕ್ಕಾಗಿ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲಪ್ರಯೋಗ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅಪ್ಪಿಗೇರಿ ವರದರಾಜ್, ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಪ್ರಶ್ನೆ ಎತ್ತಿದ ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ತಮ್ಮ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧದ ಕ್ರಮವಾಗಿದೆ ಎಂದು ಆರೋಪಿಸಿದರು.
ಮುಖಂಡ ಎಂ.ರಾಜೇಂದ್ರ ಪ್ರಸಾದ್ ಮಾತನಾಡಿ, ದೆಹಲಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯ ವೇಳೆ ಎಸ್‌ಎಫ್‌ಐ ಕಾರ್ಯಕರ್ತರು ಕೈಯಲ್ಲಿ ಫಲಕಗಳನ್ನು ಹಿಡಿದು, "ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಿಲ್ಲಿಸಿ ", "ನೀಟ್ ಅಕ್ರಮಗಳ ಸಮಗ್ರ ತನಿಖೆ ನಡೆಸಿ ", "ಶಿಕ್ಷಣ ಉಳಿಸಿ, ವಿದ್ಯಾರ್ಥಿಗಳನ್ನು ರಕ್ಷಿಸಿ " ಎಂಬ ಘೋಷಣೆಗಳನ್ನು ಕೂಗಿದರು. ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ಮೇಯರ್ ಪಿ.ಗಾದೆಪ್ಪ, ವಿದ್ಯಾರ್ಥಿ ಮುಖಂಡರಾದ ಯು.ಎರಿಸ್ವಾಮಿ, ಡಿವೈಎಫ್‌ಐ ಮುಖಂಡ ಸಿದ್ದಣ್ಣ, ವಕೀಲರಾದ ಬಾದಾಮಿ ಶಿವಲಿಂಗನಾಯಕ, ಹುಸೇನಪ್ಪ, ವಿಜಯಕುಮಾರ್, ಜನವಾದಿ ಮಹಿಳಾ ಸಂಘಟನೆಯ ಜೆ.ಚಂದ್ರಕುಮಾರಿ, ಮಲ್ಲಮ್ಮ, ಸಿಐಟಿಯು ಮುಖಂಡರಾದ ತಿಪ್ಪೇಸ್ವಾಮಿ, ಆಮ್‌ಆದ್ಮಿ ಪಕ್ಷದ ಮಂಜುನಾಥ, ಕಾರ್ಮಿಕ ಮುಖಂಡ ಟಿ.ಜಿ.ವಿಠಲ, ಶ್ರೀನಿವಾಸ್ ಕರ್ಚೇಡ್, ಮಲ್ಲೇಶ್ವರಿ, ಲೇಖಕ ಅಬ್ದುಲ್ ಹೈ ತೋರಣಗಲ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.