ಶೂದ್ರರು, ದಲಿತರು ಬಹಳ ಆಸೆ ಇಟ್ಟುಕೊಂಡು ಬಿಜೆಪಿಗೆ ಹೋಗಬೇಡಿ. ಅಲ್ಲಿ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು ಯಾವುದೇ ಅಧಿಕಾರ, ಸ್ಥಾನಮಾನ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶೂದ್ರರು, ದಲಿತರು ಬಹಳ ಆಸೆ ಇಟ್ಟುಕೊಂಡು ಬಿಜೆಪಿಗೆ ಹೋಗಬೇಡಿ. ಅಲ್ಲಿ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು ಯಾವುದೇ ಅಧಿಕಾರ, ಸ್ಥಾನಮಾನ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಬಿಜೆಪಿಯ ಹಲಾಲ್, ಹಿಜಾಬ್ ಸೇರಿ ಕೋಮು ಗಲಭೆಯಲ್ಲಿ ಜೈಲಿಗೆ ಹೋಗಿರುವವರು ಶೂದ್ರರು. ಬಿಜೆಪಿ ನಾಯಕರ ಮಕ್ಕಳು ಜೈಲಿಗೆ ಹೋಗಿಲ್ಲ. ಯಡಿಯೂರಪ್ಪ, ಸಿ.ಟಿ.ರವಿ ಮಕ್ಕಳು ಹೋರಾಟ ಮಾಡಿ ಜೈಲಿಗೆ ಹೋಗಲ್ಲ. ಬಿಜೆಪಿ ನಾಯಕರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ ನಿಮ್ಮ ಮಕ್ಕಳು ಜೈಲಿಗೆ ಸೇರುತ್ತಿದ್ದಾರೆ. ಬಿಜೆಪಿಯವರು ಶೂದ್ರರು, ದಲಿತರನ್ನು ಉಪಯೋಗಿಸಿಕೊಳ್ಳುತ್ತಾರೆ ಅಷ್ಟೆ. ಯಾವ ಸ್ಥಾನ ಮಾನ, ಗೌರವ ನೀಡಲ್ಲ. ಕಾಂಗ್ರೆಸ್‌ ತತ್ವ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಲ್ಪ ತಡವಾದರೂ ಸೂಕ್ತ ಸ್ಥಾನಮಾನ ಸಿಗುತ್ತದೆ. ಕಾಯುವ ತಾಳ್ಮೆ ಇರಬೇಕಷ್ಟೆ. ನಾನು ಕೂಡ ಕೆಪಿಸಿಸಿ ಅಧ್ಯಕ್ಷನಾಗಲು 53 ವರ್ಷ ಬೇಕಾಯಿತು ಎಂದರು.

22 ಅಣೆಕಟ್ಟು ಕಟ್ಟಿರುವುದು ಕಾಂಗ್ರೆಸ್‌:

ಕರ್ನಾಟಕದಲ್ಲಿರುವ 26 ಅಣೆಕಟ್ಟುಗಳ ಪೈಕಿ ಒಂದು ಮಹಾರಾಜರು ಕಟ್ಟಿದ್ದಾರೆ. ಬ್ರಿಟಿಷರು 3 ಅಣೆಕಟ್ಟು ಕಟ್ಟಿದ್ದರೆ, ಉಳಿದ 22 ಅಣೆಕಟ್ಟು ಕಟ್ಟಿರುವುದು ಕಾಂಗ್ರೆಸ್ ಸರ್ಕಾರಗಳು. ಬಿಜೆಪಿಯವರು ಒಂದು ಬಾವಿ ಕೂಡ ತೋಡಿಲ್ಲ. ಹಿಂದಿನಿಂದ ಕಟ್ಟಿಕೊಂಡು ಬಂದು ಉದ್ದಿಮೆಗಳನ್ನೆಲ್ಲ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮಹಾನುಭಾವರು ಮಾರುತ್ತಿದ್ದಾರೆ. ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತಿದ್ದಾರೆ. ದೇಶದ ಬಡವರು, ರೈತರು, ಕಾರ್ಮಿಕರ ಬಗ್ಗೆ ಯೋಚನೆಯನ್ನೂ ಮಾಡುತ್ತಿಲ್ಲ ಎಂದರು ಕಿಡಿಕಾರಿದರು.

ಕಾಂಗ್ರೆಸ್‌ಗೆ ಬರುವಾಗ ತಮ್ಮ ಭವಿಷ್ಯ ಅಷ್ಟೇ ನೋಡಬೇಡಿ, ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂದು ಆಲೋಚಿಸಿ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಶಿಕ್ಷಣ ವ್ಯವಸ್ಥೆ ನಾಶ ಮಾಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಬಿಜೆಪಿ ನಾಯಕರ ಮನೆಗೆ ಪ್ರಶ್ನೆ ಪತ್ರಿಕೆ ಹೋಗುತ್ತದೆ. ಬೇರೆಯವರು 40 ಲಕ್ಷ ರು. ನೀಡಿ ಖರೀದಿ ಮಾಡಬೇಕಾಗಿದೆ. ನಾವು ಬಿಜೆಪಿ ತತ್ವ ಸಿದ್ಧಾಂತ ವಿರುದ್ಧ ಹೋರಾಟ ಮಾಡುವವರು. ನೀವು ಹೋರಾಟ ಮಾಡಬೇಕು ಎಂದರು.

ಕಾಂಗ್ರೆಸ್ ಪಕ್ಷ ನೀವು ಯಾವುದೇ ಧರ್ಮ ಪಾಲಿಸಿ, ಯಾವುದೇ ದೇವರನ್ನು ಪೂಜಿಸಿ. ಸರ್ಕಾರಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಸರ್ಕಾರ ಎಲ್ಲರಿಗೂ ಸೇರಿದ್ದು ಎಂದು ಹೇಳುವ ದೊಡ್ಡ ಗ್ರಂಥವೇ ಸಂವಿಧಾನ. ಇದನ್ನು ಉಳಿಸಿಕೊಂಡು ಹೋಗಿ. ಅಧಿಕಾರದ ಆಸೆಗೆ ಕೆಲವರು ಬಿಜೆಪಿಗೆ ಹೋಗಿರಬಹುದು ಅವರೆಲ್ಲರೂ ನರೇಂದ್ರಬಾಬು ಅವರಂತೆ ವಾಪಸ್ ಬರುತ್ತಾರೆ ಎಂದು ಹೇಳಿದರು.