ರಾಜ್ಯ ಸರ್ಕಾರದ ವಿರುದ್ಧ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ ‘ವಂದೇ ಮಾತರಂ’ ಗೀತೆ ಮೊಟಕುಗೊಳಿಸಿದ್ದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತೊಂದು ಪಾದಯಾತ್ರೆ ಘೋಷಿಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ‘ಬಳ್ಳಾರಿ ಚಲೋ’ ಪಾದಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ ‘ವಂದೇ ಮಾತರಂ’ ಗೀತೆ ಮೊಟಕುಗೊಳಿಸಿದ್ದರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತೊಂದು ಪಾದಯಾತ್ರೆ ಘೋಷಿಸಿದ್ದಾರೆ.

ಬಿಜೆಪಿ ಮತ್ತು ಸಾರ್ವಜನಿಕರು ಇದೇ ಸೆ.15ರಿಂದ 5 ದಿನಗಳ ಕಾಲ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿ ವಂದೇ ಮಾತರಂ ಗೀತೆ ಮೊಟಕುಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಲಿದ್ದೇವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪಾದಯಾತ್ರೆ ಮುಖಾಂತರ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಂದೇ ಮಾತರಂ ಗೀತೆ ಮೊಟಕುಗೊಳಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಒತ್ತಡ ಹೇರಲಿದ್ದೇವೆ ಎಂದು ಹೇಳಿದರು.

ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ಗೀತೆ. ಅದು ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸಿದೆ. ಎಲ್ಲ ಆರು ಚರಣಗಳನ್ನು ಹಾಡುವಂತೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಅವರು ಕೇವಲ ಎರಡು ಚರಣಗಳನ್ನು ಹಾಡಿದರೆ ಸಾಕೆಂದು ತೀರ್ಮಾನಿಸಿದ್ದು ದುರ್ದೈವ. ಅಲ್ಪಸಂಖ್ಯಾತರನ್ನು ಓಲೈಸುವ ನಿಟ್ಟಿನಲ್ಲಿ ಅವರು ಈ ರೀತಿ ನಿರ್ಧಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

ವಂದೇ ಮಾತರಂ ಗೀತೆಯ ಆರು ಚರಣ ಹಾಡುವ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಗಳಿಂದ ರಾಜ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಠ ಕಲಿಯಲಿ ಎಂದು ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.

- ಸೆ.15ರಿಂದ 5 ದಿನ ಎಲ್ಲ 224 ಕ್ಷೇತ್ರಗಳಲ್ಲೂ ಕಾಲ್ನಡಿಗೆ ಹೋರಾಟ

- ನಿರ್ಧಾರ ವಾಪಸ್‌ಗಾಗಿ ತಹಶೀಲ್ದಾರ್‌, ಡೀಸಿಗೆ ಮನವಿ: ಬಿವೈವಿ

- ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕಿಲ್ಲ, 2 ಚರಣ ಹಾಡಿದರೆ ಸಾಕು ಎಂದು ಸರ್ಕಾರ ಆದೇಶ

- ಈ ಕ್ರಮಕ್ಕೆ ಬಿಜೆಪಿಯಿಂದ ತೀವ್ರ ವಿರೋಧ. ಜನರ ಜತೆಗೂಡಿ ಎಲ್ಲ 224 ಕ್ಷೇತ್ರಗಳಲ್ಲೂ ಪಾದಯಾತ್ರೆಗೆ ನಿರ್ಧಾರ

- ಸೆ.15ರಿಂದ 5 ದಿನಗಳ ಕಾಲ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ತಹಸೀಲ್ದಾರ್‌, ಡೀಸಿಗೆ ಮನವಿ ಸಲ್ಲಿಕೆ

- ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಒತ್ತಡ ಹೇರಲು ತೀರ್ಮಾನ: ಬಿವೈವಿ