ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಬಿಜೆಪಿ ಮತ್ತದರ ಸಂಘಟನೆಗಳು ತಾವಿನ್ನೂ ಮನುಸ್ಮೃತಿಯ ಕಾಲದಲ್ಲಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತದ ಸಂವಿಧಾನದ ಸಮಾನತೆಯ ಮತ್ತು ಅಸ್ಪೃಶ್ಯತೆ ವಿರೋಧಿ ಆಶಯಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಬಿಜೆಪಿ ಮತ್ತದರ ಸಂಘಟನೆಗಳು ತಾವಿನ್ನೂ ಮನುಸ್ಮೃತಿಯ ಕಾಲದಲ್ಲಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತದ ಸಂವಿಧಾನದ ಸಮಾನತೆಯ ಮತ್ತು ಅಸ್ಪೃಶ್ಯತೆ ವಿರೋಧಿ ಆಶಯಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರ ಅಜ್ಜರಕಾಡು ಗಾಂಧಿ ಪ್ರತಿಮೆಯ ಮುಂದೆ, ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ದೀಕರಣ ಮಾಡಿರುವ ಬಿಜೆಪಿಯನ್ನು ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.ಈ ಕೃತ್ಯಗಳು ದೇಶವನ್ನು ಮತ್ತೆ 18ನೇ ಶತಮಾನಕ್ಕೆ ಕೊಂಡೊಯ್ಯುವ ಬಿಜೆಪಿಯ ಪ್ರಯತ್ನವಾಗಿದೆ. ದೇಶದಲ್ಲಿ 50 ಸಾವಿರಕ್ಕೂ ಅಧಿಕ ದಲಿತರ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮನ್ ಕಿ ಬಾತ್‌ನಲ್ಲಿ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ. ಅಯೋಧ್ಯೆ ರಾಮಮಂದಿರದ ಹಣದ ದುರ್ಬಳಕೆಯ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ ಸೊರಕೆ, ಪ್ರಧಾನಿ ಮೋದಿ ಅವರ ‘ನಾ ಖಾವುಂಗಾ, ನಾ ಖಾನೇ ದೂಂಗಾ’ ಘೋಷಣೆ ಎಲ್ಲಿ ಹೋಯಿತು ಎಂದು ಲೇವಡಿ ಮಾಡಿದರು.ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ದೀಕರಿಸಿದರೇ ಸಾಲದು, ಬಿಜೆಪಿಗರು ತಮ್ಮ ಅಂತರಂಗ ಹಾಗೂ ಮನಸ್ಥಿತಿಯನ್ನೂ ಶುದ್ಧಗೊಳಿಸಬೇಕು ಎಂದು ಸಲಹೆ ಮಾಡಿದರು.ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು. ಬೈಂದೂರು ಬ್ಲಾಕ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಮಾತನಾಡಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ನಿರ್ಗಮನ ಅಧ್ಯಕ್ಷ ಅಶೋಕ್ ಕೊಡವೂರು, ಪಕ್ಷದ ಪ್ರಮುಖರಾದ ರಮೇಶ್ ಕಾಂಚನ್, ಹರಿಪ್ರಸಾದ್ ರೈ, ಜ್ಯೋಚಿ ಹೆಬ್ಬಾರ್, ಪ್ರಖ್ಯಾತ್ ಶೆಟ್ಟಿ, ರೋಶನಿ ಒಲಿವೇರಾ, ಮಹಾಬಲ ಕುಂದರ್ ಮುಂತಾದವರು ಭಾಗವಹಿಸಿದ್ದರು.