ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿ ಅರ್ಚಕರು ಕಾರ್ಯ ನಿರ್ವಹಿಸಿದರೆ, ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರು ಹಾಗೂ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿ ಅರ್ಚಕರು ಕಾರ್ಯ ನಿರ್ವಹಿಸಿದರೆ, ಪತ್ರಿಕಾ ವಿತರಕರು ಪತ್ರಿಕೆ ಮತ್ತು ಓದುಗರು ಹಾಗೂ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಹೇಳಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ಸಹಯೋಗದಲ್ಲಿ ಇಲ್ಲಿನ ಕೇರಳ ಸಮಾಜಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘ ಕೊಡಮಾಡುವ ಶೈಕ್ಷಣಿಕ ದತ್ತಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆ ಮತ್ತು ಪತ್ರಿಕಾ ವಿತರಕರು ಒಂದು ಕುಟುಂಬವಿದ್ದಂತೆ. ಪತ್ರಿಕಾ ಸಂಪಾದಕ ಎಷ್ಟೇ ಉತ್ತಮವಾಗಿ ಪತ್ರಿಕೆ ಹೊರತಂದರೂ, ಅದು ಓದುಗರಿಗೆ ತಲುಪದಿದ್ದರೆ ವ್ಯರ್ಥ. ಆದ್ದರಿಂದ ಪತ್ರಿಕೆಗಳ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ವಿಶ್ಲೇಷಿಸಿದರು.

ಪತ್ರಿಕೆ ಓದುವ ಸಂಖ್ಯೆ ಕಡಿಮೆ:

ಇತ್ತೀಚಿನ ವರ್ಷಗಳಲ್ಲಿ ಹಿರಿಯ ತಲೆಮಾರಿನವರು ಮಾತ್ರ ಪತ್ರಿಕೆಗಳನ್ನು ಓದುತ್ತಿದ್ದು, ಯುವ ಜನರಲ್ಲಿ ಪತ್ರಿಕೆ ಓದುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಪತ್ರಿಕೆ ವಿತರಣೆ ಎಷ್ಟು ಕಷ್ಟ ಎಂಬುದು ತನಗೂ ಅರಿವಿದೆ ಎಂದು ತಮ್ಮ ಸ್ವ ಅನುಭವವನ್ನು ಬಿಚ್ಚಿಟ್ಟ ಚಿದ್ವಿಲಾಸ್ ಇಂದು ಪತ್ರಿಕಾ ವಿತರಣೆ ಲಾಭದ ವೃತ್ತಿಯಾಗಿ ಉಳಿದಿಲ್ಲ. ಬದಲಾಗಿ ಪತ್ರಿಕೆಗಳ ಮೇಲಿನ ಪ್ರೀತಿಯಿಂದ ಮಾತ್ರ ವಿತರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಓದುಗರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಪತ್ರಿಕೆಗಳ ಬೆಲೆ ಮಾತ್ರ ನಿಂತ ನೀರಾಗಿದೆ ಎಂದು ನುಡಿದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಪತ್ರಿಕಾ ವಿತರಕರೇ ಪತ್ರಿಕೆಗಳಿಗೆ ಸುದ್ದಿ ನೀಡುವ ವರದಿಗಾರರಾಗಿಯೂ ಆಗಿರುವುದರಿಂದ ಅವರು ಸಮಾಜದ ಸಮಸ್ಯೆಗಳನ್ನು ಪತ್ರಿಕೆಗಳ ಗಮನಕ್ಕೆ ತರುವುದರಿಂದ ಸಮಾಜದಲ್ಲೂ ಸಾಕಷ್ಟು ಬದಲಾವಣೆ ತರಲು ಸಾಧ್ಯವಿದೆ ಎಂದು ತಿಳಿಸಿದರು.

ಪತ್ರಿಕಾ ವಿತರಕರ ಕ್ಷೇಮ ನಿಧಿಗಾಗಿ ‘ಶಕ್ತಿ’ ಸಂಸ್ಥೆಯಿಂದ ಒಂದು ಲಕ್ಷ ರು.ಗಳ ನೆರವನ್ನು ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅವರು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ.ಜಿ.ಸತೀಶ್ ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್ ಅವರು, ಪತ್ರಿಕೆಗಳು, ಪತ್ರಿಕಾ ವಿತರಕರು ಮತ್ತು ಪತ್ರಕರ್ತರ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರಲ್ಲದೆ, ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಪತ್ರಿಕಾ ವಿತರಕರಿಗೆ ವಸತಿ ಸಂಕೀರ್ಣಗಳನ್ನು ಸರ್ಕಾರ ನಿರ್ಮಿಸಿಕೊಡಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಅನುದಾನ ನೀಡುವುದಾಗಿ ಘೋಷಿಸಿದ್ದು, ಅದು ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ವೇದಿಕೆಯಲ್ಲಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಗಮನಸೆಳೆದರು. ಅಲ್ಲದೆ ಈ ನಿಟ್ಟಿನಲ್ಲಿ ಸರಕಾರದ ಗಮನಸೆಳೆಯುವಂತೆ ಮನವಿ ಮಾಡಿದರು.

ಸಾಮಾಜಿಕ ಭದ್ರತೆಗೆ ಅವಕಾಶ:

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪತ್ರಿಕಾ ವಿತರಕರು ಏಜೆಂಟರು ಅಸಂಘಟಿತ ಕಾರ್ಮಿಕರ ವಿಭಾಗದಲ್ಲಿ ಬರುತ್ತಿದ್ದು ಸಾಮಾಜಿಕ ಭದ್ರತೆಗಳನ್ನು ಹೊಂದಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದು, ಸಂಘದ ಮೂಲಕ ಪ್ರತಿಯೊಬ್ಬರು ಈ ಸೌಲಭ್ಯವನ್ನು ಹೊಂದಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೊರವಂಡ ವಸಂತಿ ಪೊನ್ನಪ್ಪ ಮತ್ತು ಕೊರವಂಡ ಪೊನ್ನಪ್ಪ ಅವರು ಸ್ಥಾಪಿಸಿರುವ ಶೈಕ್ಷಣಿಕ ದತ್ತಿ ನಿಧಿಯ ಪ್ರತಿಭಾ ಪುರಸ್ಕಾರವನ್ನು ಶಿರಂಗಾಲದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಣಯ್ ಬಿ.ಪಿ. ಅವರಿಗೆ ನೀಡಿ ಗೌರವಿಸಲಾಯಿತು.

ಇತ್ತೀಚಿಗೆ ಸುಂಟಿಕೊಪ್ಪದಲ್ಲಿ ಜಾತ್ಯತೀತ ಮತ್ತು ಪಕ್ಷಾತೀತ ನೆಲೆಗಟ್ಟಿನಲ್ಲಿ ಸಂಗಡಿಸಲಾಗಿರುವ ವೇವ್ ಸಂಘಟನೆಯ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯದ ವಕೀಲರಾದ ಪರಾಜ್ ಉಸ್ಮಾನ್ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷರಾದ ಬಿ.ಸಿ.ದಿನೇಶ್ ವಹಿಸಿದ್ದರು.

ವೇದಿಕೆಯಲ್ಲಿ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಟಿ.ಜಿ.ಸತೀಶ್, ವೇವ್ ಸಂಸ್ಥೆಯ ಅಧ್ಯಕ್ಷ ಕೆ.ಎ. ಲತೀಫ್ ಕೇರಳಂ ಸಮಾಜದ ಪಿ. ರವೀಂದ್ರನ್ ಜಿಲ್ಲಾ ಸಂಘದ ಖಜಾಂಜಿ ಕಾರ್ಯಕ್ರಮದ ಸಂಚಾಲಕರಾದ ಟಿ.ಕೆ.ಸಂತೋಷ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪತ್ರಿಕಾ ವಿತರಕರು ಏಜೆಂಟರು ಮತ್ತು ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಮೊದಲಿಗೆ ಸಂಘದ ಉಪಾಧ್ಯಕ್ಷ ನವೀನ್ ಚಿನ್ನಪ್ಪ ಪ್ರಾರ್ಥಿಸಿದರು. ತಾಲೂಕು ಸಂಘದ ಸಲಹೆಗಾರ ಕೆ.ತಿಮ್ಮಪ್ಪ ಸ್ವಾಗತಿಸಿ, ಖಜಾಂಜಿ ಕೆ.ಎಸ್.ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ತಾಲೂಕು ಸಂಘದ ಸಹಕಾರ್ಯದರ್ಶಿ ಬಿ.ಎನ್.ರವಿಕುಮಾರ್ ವಂದಿಸಿದರು.