ಇಂದು ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹಿನ್ನಡೆಯಾದರೆ, ಅಮೆರಿಕದ ಕಠಿಣ ಸುಂಕ ನೀತಿಗಳು ಸಡಿಲಗೊಂಡು ಭಾರತದಂತಹ ದೇಶಗಳಿಗೆ ತಾತ್ಕಾಲಿಕ ನೆಮ್ಮದಿ ಸಿಗಲಿದೆ.

ಪ್ರಾಜ್ಞಾ ಕೆ., ವಿಶ್ಲೇಷಕಿ

ಇಂದು ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಹಿನ್ನಡೆಯಾದರೆ, ಅಮೆರಿಕದ ಕಠಿಣ ಸುಂಕ ನೀತಿಗಳು ಸಡಿಲಗೊಂಡು ಭಾರತದಂತಹ ದೇಶಗಳಿಗೆ ತಾತ್ಕಾಲಿಕ ನೆಮ್ಮದಿ ಸಿಗಲಿದೆ. ವ್ಯಾಪಾರ ಒಪ್ಪಂದಗಳಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾದರೂ, ವಿದೇಶಿ ಬಂಡವಾಳದ ಹೊರಹರಿವನ್ನು ತಡೆಯುವ ಆಂತರಿಕ ಶಕ್ತಿ ಮತ್ತು ಎಸ್‌ಐಪಿ ಹೂಡಿಕೆಗಳ ಬೆಂಬಲ ಭಾರತೀಯ ಮಾರುಕಟ್ಟೆಗೆ ರಕ್ಷಾಕವಚವಾಗಿ ನಿಲ್ಲಲಿದೆ.

ಟ್ರಂಪ್ ಅವರ ರಿಪಬ್ಲಿಕನ್‌ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ । ಭಾರತದ ಷೇರು ಮಾರುಕಟ್ಟೆ, ಐಟಿ ರಂಗಕ್ಕೆ ಆತಂಕ

ಅಮೆರಿಕದ ರಾಜಕೀಯ ದಿಕ್ಕನ್ನು ನಿರ್ಧರಿಸುವ ಅತ್ಯಂತ ನಿರ್ಣಾಯಕ ಮಧ್ಯಂತರ ಚುನಾವಣೆಗಳು ಮಂಗಳವಾರ ನಡೆಯಲಿವೆ. ಅಮೆರಿಕದ ಸಂಸತ್ತಾದ (ಕಾಂಗ್ರೆಸ್) ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಎಲ್ಲಾ 435 ಸ್ಥಾನಗಳಿಗೆ ಮತ್ತು ಸೆನೆಟ್‌ನ 100 ಸ್ಥಾನಗಳಲ್ಲಿ 35 ಸ್ಥಾನಗಳಿಗೆ ಮತದಾನ ನಡೆಯಲಿದೆ. ದೇಶದ 36 ರಾಜ್ಯಗಳಲ್ಲಿ ಗವರ್ನರ್ ಹುದ್ದೆಗಳಿಗೂ ಚುನಾವಣೆಗಳು ನಡೆಯಲಿವೆ. ಸಮೀಕ್ಷೆಗಳ ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಿ, ಡೆಮಾಕ್ರಟಿಕ್ ಪಕ್ಷವು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಜೀವನ ನಿರ್ವಹಣೆ ವೆಚ್ಚದ ಏರಿಕೆ ಮತ್ತು ಟ್ರಂಪ್‌ ಆಡಳಿತದ ಬಗ್ಗೆ ಇರುವ ಅಸಮಾಧಾನವು ಈ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಿವೆ.

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೆಯುವ ಈ ಚುನಾವಣೆ ಕೇವಲ ಅಲ್ಲಿನ ಶಾಸಕಾಂಗದ ಬಲಾಬಲವನ್ನು ನಿರ್ಧರಿಸುವುದು ಮಾತ್ರವಲ್ಲ, ಇಡೀ ಜಾಗತಿಕ ಹಣಕಾಸು ಮಾರುಕಟ್ಟೆಯ ಮೇಲೆಯೂ ನೇರ ಪರಿಣಾಮ ಬೀರಲಿದೆ. ಅಧ್ಯಕ್ಷ ಟ್ರಂಪ್ ಅವರ ನೀತಿಗಳಿಗೆ ಶಾಸಕಾಂಗದಲ್ಲಿ ಹಿನ್ನಡೆಯಾಗುತ್ತದೆಯೇ ಅಥವಾ ಅವರ ಬಲ ಹೆಚ್ಚಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಈ ರಾಜಕೀಯ ಸ್ಥಿತ್ಯಂತರಗಳು ಭಾರತೀಯ ಷೇರು ಮಾರುಕಟ್ಟೆ ಹಾಗೂ ದೇಶೀಯ ಉದ್ಯಮ ರಂಗದ ಮೇಲೂ ವ್ಯಾಪಕ ಪರಿಣಾಮ ಬೀರಲಿವೆ.

ವ್ಯಾಪಾರ ಒಪ್ಪಂದದ ಮೇಲೆ ಪರಿಣಾಮ:

ಮೊದಲನೆಯದಾಗಿ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆ ಚುನಾವಣಾ ಫಲಿತಾಂಶಗಳಿಗಿಂತ ಮುಂಚಿತವಾಗಿ ಆಗದೇ ಇದ್ದರೆ, ಆ ಪ್ರಕ್ರಿಯೆ ಕೊಂಚ ನಿಧಾನಗೊಳ್ಳುವ ಸಾಧ್ಯತೆಯಿದೆ. ಆದರೆ, ಇದು ಭಾರತಕ್ಕೆ ದೊಡ್ಡ ಹಿನ್ನಡೆಯೇನೂ ಆಗುವುದಿಲ್ಲ. ಏಕೆಂದರೆ, ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಕೇವಲ ಸುಂಕಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಅದು ಪೂರೈಕೆ ಸರಪಳಿಯ ವೈವಿಧ್ಯೀಕರಣ, ತಂತ್ರಜ್ಞಾನ ಸಹಕಾರ, ಇಂಧನ ವ್ಯಾಪಾರ ಮತ್ತು ಚೀನಾ ಆಧರಿತ ಉತ್ಪಾದನಾ ಜಾಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ದೊಡ್ಡ ಮಟ್ಟದ ಉದ್ದೇಶಗಳಿಗೆ ಬೆಸೆದುಕೊಂಡಿದೆ. ಅಮೆರಿಕದಲ್ಲಿ ರಿಪಬ್ಲಿಕನ್ ಅಥವಾ ಡೆಮಾಕ್ರಟಿಕ್‌ - ಯಾವುದೇ ಆಡಳಿತ ಬಂದರೂ ಭಾರತದೊಂದಿಗಿನ ಕಾರ್ಯತಂತ್ರದ ಬಾಂಧವ್ಯವನ್ನು ಗಟ್ಟಿಗಳಿಸುವುದಕ್ಕೆ ಎರಡೂ ಪಕ್ಷಗಳು ಬೆಂಬಲ ನೀಡುತ್ತಾ ಬಂದಿವೆ.

ಜಾಗತಿಕ ನೀತಿಗಳ ಮೇಲೆ ಪ್ರಭಾವ:

ಒಂದು ವೇಳೆ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಹಿನ್ನಡೆಯಾದರೆ, ಟ್ರಂಪ್ ಅವರ ಕಠಿಣ ಸುಂಕಗಳು ಹಾಗೂ ಆಕ್ರಮಣಕಾರಿ ವ್ಯಾಪಾರ ನೀತಿಗಳಿಗೆ ವಿರೋಧ ಪಕ್ಷಗಳ ತಡೆ ಬೀಳುವ ಸಾಧ್ಯತೆಯಿದೆ. ಇದರಿಂದ ಜಾಗತಿಕ ವ್ಯಾಪಾರ ವಲಯದಲ್ಲಿ ಹಠಾತ್ ನಿರ್ಧಾರಗಳಿಂದ ಉಂಟಾಗುತ್ತಿದ್ದ ಆತಂಕಗಳು ಶಮನಗೊಂಡು, ಭಾರತದಂತಹ ಆಮದು ಆಧರಿತ ದೇಶಗಳಿಗೆ ಕೊಂಚ ಸಮಾಧಾನಕರ ವಾತಾವರಣ ನಿರ್ಮಾಣವಾಗಲಿದೆ.

ಚುನಾವಣೆಯಲ್ಲಿ ಎದುರಾಗುವ ಹಿನ್ನಡೆಯ ಪ್ರಮಾಣವನ್ನು ಆಧರಿಸಿ, ಟ್ರಂಪ್ ಅವರಿಗೆ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಕಠಿಣ ಸುಂಕಗಳನ್ನು ಹೇರುವುದು ಅಥವಾ ಅದನ್ನು ಮುಂದುವರಿಸಿಕೊಂಡು ಹೋಗುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಅಮೆರಿಕದ ಸಂಸತ್ತು, ಕಾರ್ಪೊರೇಟ್ ಲಾಬಿಗಳು ಮತ್ತು ನ್ಯಾಯಾಲಯಗಳು ಹೆಚ್ಚಿನ ಪ್ರಭಾವ ಬೀರಬಹುದು. ಇದರ ಪರಿಣಾಮವಾಗಿ ಭಾರತದ ಭಾರತ್ ಫೋರ್ಜ್, ಕೆಇಐ ಇಂಡಸ್ಟ್ರೀಸ್, ಗೋಕಲ್ದಾಸ್ ಎಕ್ಸ್‌ಪೋರ್ಟ್ಸ್ ಮತ್ತು ಕೆಪಿಆರ್ ಮಿಲ್ಸ್‌ನಂತಹ ಜವಳಿ ರಫ್ತುದಾರರು ಹಾಗೂ ನವೀನ್ ಫ್ಲೋರೀನ್‌ನಂತಹ ಕೆಮಿಕಲ್ ತಯಾರಿಕಾ ಕಂಪನಿಗಳ ಷೇರು ಮೌಲ್ಯದಲ್ಲಿ ಸಕಾರಾತ್ಮಕ ಏರಿಕೆ ಕಂಡುಬರಬಹುದು.

ಭಾರತೀಯ ಷೇರು ಮಾರುಕಟ್ಟೆಗೆ ಬರೆ?:

ಅಮೆರಿಕದಲ್ಲಿ ನಡೆಯುವ ರಾಜಕೀಯ ಅಥವಾ ಆರ್ಥಿಕ ಬದಲಾವಣೆಗಳು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ, ಕೆಲವು ಆರ್ಥಿಕ ಸೂಚಕಗಳ ಮೂಲಕ ಪ್ರಭಾವ ಬೀರುತ್ತವೆ. ವಿಶ್ವದ ದೊಡ್ಡ ದೊಡ್ಡ ಹೂಡಿಕೆದಾರರು ಮತ್ತು ಕಂಪನಿಗಳು ಭಾರತದ ಷೇರು ಮಾರುಕಟ್ಟೆಯಲ್ಲಿ ಕೋಟ್ಯಂತರ ರುಪಾಯಿಗಳನ್ನು ಹೂಡಿಕೆ ಮಾಡಿವೆ. ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಅಲ್ಲಿನ ಬಡ್ಡಿ ದರಗಳಲ್ಲಿ ಅಥವಾ ತೆರಿಗೆ ನೀತಿಗಳಲ್ಲಿ ಏರಿಳಿತ ಉಂಟಾದರೆ, ಆ ಹೂಡಿಕೆದಾರರು ಎಚ್ಚೆತ್ತುಕೊಳ್ಳುತ್ತಾರೆ. ಅಮೆರಿಕದಲ್ಲೇ ಸುರಕ್ಷಿತವಾಗಿ ಹೆಚ್ಚು ಲಾಭ ಸಿಗುತ್ತದೆ ಎಂದಾದರೆ, ಅವರು ಭಾರತದ ಮಾರುಕಟ್ಟೆಯಿಂದ ತಮ್ಮ ಹಣವನ್ನು ವಾಪಸ್ ಪಡೆಯಲು ಶುರು ಮಾಡುತ್ತಾರೆ. ಹೀಗೆ ಹೊರದೇಶದ ಹೂಡಿಕೆದಾರರು ಏಕಾಏಕಿ ಹಣ ಹಿಂಪಡೆದಾಗ, ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿಯುತ್ತವೆ.

ಭಾರತದ ಐಟಿ ಕ್ಷೇತ್ರಗಳಿಗೆ ಆತಂಕ:

ಅಮೆರಿಕದ ಮಧ್ಯಂತರ ಚುನಾವಣೆಗಳು ಭಾರತದ ಪ್ರಮುಖ ಉದ್ಯಮ ಕ್ಷೇತ್ರಗಳ ಮೇಲೆ ನೇರ ಹಾಗೂ ವಿಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತವೆ. ಮೊದಲನೆಯದಾಗಿ, ಭಾರತದ ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ತನ್ನ ಹೆಚ್ಚಿನ ಆದಾಯಕ್ಕಾಗಿ ಅಮೆರಿಕದ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದೆ. ಅಮೆರಿಕದಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ ಅಲ್ಲಿನ ಕಂಪನಿಗಳು ತಮ್ಮ ತಂತ್ರಜ್ಞಾನ ವೆಚ್ಚವನ್ನು ಕಡಿತಗೊಳಿಸುತ್ತವೆ. ಇದರಿಂದ ಭಾರತೀಯ ಐಟಿ ಕಂಪನಿಗಳ ಹೊಸ ಪ್ರಾಜೆಕ್ಟ್‌ಗಳು ಮತ್ತು ಲಾಭ ಕಡಿಮೆಯಾಗುವ ಆತಂಕವಿರುತ್ತದೆ. ಆದರೆ, ಈ ಸಮಯದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದರೆ ಐಟಿ ರಫ್ತುದಾರರಿಗೆ ಹಣಕಾಸಿನ ರೂಪದಲ್ಲಿ ಅಲ್ಪ ಸಮಾಧಾನವೂ ಸಿಗುತ್ತದೆ.

ಔಷಧ, ಜವಳಿ ವಲಯಗಳಿಗೆ ಭರವಸೆ:

ಔಷಧ, ಜವಳಿ ಮತ್ತು ಉತ್ಪಾದನಾ ವಲಯಗಳಿಗೆ ಈ ಚುನಾವಣೆಗಳು ಹೊಸ ಭರವಸೆ ತರಬಹುದು. ಅಮೆರಿಕನ್ನರು ಬಳಸುವ ಹೆಚ್ಚಿನ ಕಡಿಮೆ ವೆಚ್ಚದ ಮಾತ್ರೆಗಳು ಮತ್ತು ಬಟ್ಟೆಗಳು ಭಾರತದಿಂದಲೇ ರಫ್ತಾಗುತ್ತವೆ. ಟ್ರಂಪ್ ಅವರ ಆಕ್ರಮಣಕಾರಿ ಆಮದು ಸುಂಕ ನೀತಿಗಳಿಗೆ ಅಮೆರಿಕ ಸಂಸತ್ತಿನಲ್ಲಿ ತಡೆ ಬಿದ್ದು ನೀತಿಗಳು ಸಡಿಲಗೊಂಡರೆ, ಭಾರತೀಯ ಕಂಪನಿಗಳಿಗೆ ಅಮೆರಿಕಕ್ಕೆ ಸರಕುಗಳನ್ನು ಕಳುಹಿಸುವುದು ಸುಲಭವಾಗುತ್ತದೆ ಮತ್ತು ಲಾಭವೂ ಹೆಚ್ಚುತ್ತದೆ.

ಕಚ್ಚಾತೈಲ ಮತ್ತು ಇಂಧನ ಆಧರಿತ ಕ್ಷೇತ್ರಗಳ ಮೇಲೆಯೂ ಇದು ಪ್ರಭಾವ ಬೀರುತ್ತದೆ. ಅಮೆರಿಕದ ರಾಜಕೀಯ ಬೆಳವಣಿಗೆಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಇಳಿಕೆಯಾದರೆ, ಭಾರತಕ್ಕೆ ಆಮದು ವೆಚ್ಚ ಕಡಿಮೆಯಾಗುತ್ತದೆ. ಇದು ದೇಶೀಯ ವಾಹನ, ಪೇಂಟ್ ಹಾಗೂ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಿಗೆ ಕಚ್ಚಾವಸ್ತುಗಳ ವೆಚ್ಚವನ್ನು ತಗ್ಗಿಸಿ, ಅವುಗಳ ಷೇರು ಮೌಲ್ಯ ಹೆಚ್ಚಲು ನೆರವಾಗುತ್ತದೆ.

ಭಾರತೀಯ ಮಾರುಕಟ್ಟೆಯ ಆಂತರಿಕ ಬಲ:

ಅಂತಿಮವಾಗಿ, ಜಾಗತಿಕ ಅಸ್ಥಿರತೆಗಳು ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ತಲುಪಿದರೂ, ಭಾರತದ ಸುದೀರ್ಘ ಆರ್ಥಿಕ ಪ್ರಗತಿಯು ತನ್ನದೇ ಆದ ದೇಶೀಯ ಶಕ್ತಿಯನ್ನು ನೆಚ್ಚಿಕೊಂಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ಮತ್ತು ಬಲವಾದ ದೇಶೀಯ ಹೂಡಿಕೆದಾರರ ಬೆಂಬಲವು ವಿದೇಶಿ ಬಂಡವಾಳದ ಹೊರಹರಿವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಮೆರಿಕದ ರಾಜಕೀಯ ಸ್ಥಿತ್ಯಂತರಗಳು ತಾತ್ಕಾಲಿಕ ಮಾರುಕಟ್ಟೆ ಏರಿಳಿತಗಳಿಗೆ ಕಾರಣವಾದರೂ, ಭಾರತದ ಬಲಿಷ್ಠ ಜಿಡಿಪಿ ಬೆಳವಣಿಗೆ ಮತ್ತು ಆಂತರಿಕ ಬೇಡಿಕೆಗಳು ಮಾರುಕಟ್ಟೆಯನ್ನು ದೀರ್ಘಾವಧಿಯಲ್ಲಿ ಸ್ಥಿರತೆಯತ್ತ ಮುನ್ನಡೆಸಲಿವೆ.