ಬೆಂಗಳೂರು : ನಗರದಲ್ಲಿ ಸುಮಾರು 35 ಲಕ್ಷ ಸ್ಥಿರಾಸ್ತಿಗಳಿರುವ ಅಂದಾಜಿದ್ದು ಈ ಪೈಕಿ 18 ಲಕ್ಷ ಆಸ್ತಿ ಮಾಲೀಕರು ಮಾತ್ರ ಆಸ್ತಿ ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ತೆರಿಗೆ ಸೋರಿಕೆ ತಡೆಯಲು ಮುಂದಿನ 6 ತಿಂಗಳಲ್ಲಿ ನಗರದ ಎಲ್ಲ ಅರ್ಹ ಆಸ್ತಿ ಮಾಲೀಕರನ್ನು ಇ-ಖಾತಾ ವ್ಯವಸ್ಥೆಯಡಿ ತರುವ ಗುರಿ ಹೊಂದಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ
ನಗರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ 18 ಲಕ್ಷ ಜನ ಆಸ್ತಿ ತೆರಿಗೆ ಪಾವತಿಸಿದರೆ, ಉಳಿದವರು ತೆರಿಗೆ ಪಾವತಿಸದೆಯೇ ತೆರಿಗೆ ಪಾವತಿದಾರರ ಹಣದಲ್ಲಿ ನಿರ್ಮಾಣವಾಗುವ ಮೂಲಸೌಕರ್ಯಗಳನ್ನು ಅನುಭವಿಸುತ್ತಿದ್ದಾರೆ. ಇ-ಖಾತಾ ಪ್ರಕ್ರಿಯೆಯಿಂದ ಆಸ್ತಿಗಳ ಸಮಗ್ರ ಡಿಜಿಟಲ್ ಆಸ್ತಿ ಡೆಟಾಬೇಸ್ ಸಿದ್ಧವಾಗುತ್ತದೆ. ನಿಜವಾದ ಮಾಲೀಕರಿಗೆ ಆಸ್ತಿಯ ಮಾಲೀಕತ್ವ ಸಿಗುತ್ತದೆ. ಆಸ್ತಿ ತೆರಿಗೆ ವಂಚನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ .ಆಸ್ತಿ ದಾಖಲೆಗಳ ಸಮಗ್ರ ಮಾಹಿತಿ ಇಲ್ಲದಿರುವುದು ಮತ್ತು ತೆರಿಗೆ ಸೋರಿಕೆಯನ್ನು ಇ - ಖಾತಾ ಮೂಲಕ ಪತ್ತೆ ಹಚ್ಚಲು ಮತ್ತು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನಗರದ ಅನಿಯಂತ್ರಿತ ಅಭಿವೃದ್ಧಿ ಮತ್ತು ದಶಕಗಳಿಂದ ಕಾಗದದ ದಾಖಲೆಗಳಲ್ಲಿ
ನಗರದ ಅನಿಯಂತ್ರಿತ ಅಭಿವೃದ್ಧಿ ಮತ್ತು ದಶಕಗಳಿಂದ ಕಾಗದದ ದಾಖಲೆಗಳಲ್ಲಿ ನಡೆಯುತ್ತಿದ್ದ ಆಸ್ತಿ ನೋಂದಣಿ, ದಾಖಲಾತಿ ಪ್ರಕ್ರಿಯೆಯು ನಗರದ ಆಸ್ತಿ ದಾಖಲಾತಿ ವ್ಯವಸ್ಥೆಯನ್ನು ಅದ್ವಾನಗೊಳಿಸಿದೆ. ಕಾಗದದ ದಾಖಲೆಗಳ ಪ್ರಕಾರ ನಗರದಲ್ಲಿ ಸುಮಾರು 24 ಲಕ್ಷ ಆಸ್ತಿಗಳಿಗೆ ಖಾತಾ ಇದೆ. ಇನ್ನು 10 ರಿಂದ 11 ಲಕ್ಷ ಆಸ್ತಿಗಳಿಗೆ ಖಾತಾ ಪಡೆದುಕೊಂಡಿಲ್ಲ. ಹೀಗಾಗಿ, ನಗರದ ಎಲ್ಲಾ ಆಸ್ತಿಗಳ ಮಾಲೀಕರು ಖಾತಾ ಮಾಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪಾಲಿಕೆಗಳಲ್ಲಿ ನೋಂದಣಿ ಮಾಡಿಕೊಳ್ಳದೇ ನಡೆಯುತ್ತಿದ್ದ ಆಸ್ತಿ ಪರಭಾರೆ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗದೆ. ಕಳೆದ ಮೂರು ದಶಕಗಳಿಂದ ಅನೇಕ ಆಸ್ತಿ ಪರಭಾರೆ ಚಟುವಟಿಕೆಗಳು ಪಾಲಿಕೆ ಕಚೇರಿ ದಾಖಲೆಗಳಲ್ಲಿ ನಮೂದು ಕೂಡ ಆಗಿಲ್ಲ. ಜನರ ಸಹಕಾರದಿಂದ ವ್ಯವಸ್ಥೆಯನ್ನು ಸರಿಪಡಿಸಬಹುದು ಎಂದು ಹೇಳಿದರು.
