ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸದಸ್ಯರಾದ ಕನಿಜ್‌ ಫಾತಿಮಾ ಅವರು ವಕ್ಫ್‌ ಜಮೀನನ್ನು ಕಾನೂನು ಬಾಹಿರವಾಗಿ ಖರೀದಿ ಮತ್ತು ಮಾರಾಟ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ದೂರಿನ ಬಗ್ಗೆ ಎರಡೂವರೆ ವರ್ಷದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರು

 ಬೆಂಗಳೂರು :  ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ, ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸದಸ್ಯರಾದ ಕನಿಜ್‌ ಫಾತಿಮಾ ಅವರು ವಕ್ಫ್‌ ಜಮೀನನ್ನು ಕಾನೂನು ಬಾಹಿರವಾಗಿ ಖರೀದಿ ಮತ್ತು ಮಾರಾಟ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಲ್ಲಿಸಿರುವ ದೂರಿನ ಬಗ್ಗೆ ಎರಡೂವರೆ ವರ್ಷದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಸೈಯದ್ ಹಬೀಬ್‌ ಸಮರ್ಸ್ತ್‌ ಆರೋಪ ಮಾಡಿದ್ದಾರೆ.

ಇದೀಗ ಖುದ್ದು ಹೈಕೋರ್ಟ್‌ ಕಲಬುರಗಿ ಪೀಠವು ದೂರುದಾರರ ಅಹವಾಲು ಆಲಿಸಿ ಮೂರು ತಿಂಗಳ ಒಳಗಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಜೂ.29 ರಂದು ಮೌಖಿಕ ಆದೇಶ ನೀಡಿದೆ. ಹೀಗಾಗಿ ಕೂಡಲೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಮಾಜಿ ಅಧ್ಯಕ್ಷರೂ ಆದ ಸೈಯದ್ ಹಬೀಬ್‌ ಸಮರ್ಸ್ತ್‌ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಮಾಜಿ ಸಚಿವ ದಿ. ಖಮರುಲ್‌ ಇಸ್ಲಾಂ ಅವರ ಪತ್ನಿ, ಹಾಲಿ ಶಾಸಕರಾದ ಕನೀಜ್ ಫಾತಿಮಾ ಅವರು 2009ರಲ್ಲಿ ಕಲಬುರಗಿಯ ಶೇಖ್‌ ರೋಜಾ ಗ್ರಾಮದ ಸರ್ವೆ ನಂ.13/2ರಲ್ಲಿನ 28.08 ಎಕರೆ ವಕ್ಫ್‌ ಜಮೀನನ್ನು ಡಾ.ಫರ್ಹಾನ್‌ ಜುನೈದಿ ಎಂಬುವವರಿಂದ ಕೇವಲ 6.25 ಲಕ್ಷ ರು.ಗೆ ಕಾನೂನು ಬಾಹಿರವಾಗಿ ಖರೀದಿ ಮಾಡಿದ್ದರು. ಬಳಿಕ 2012ರಲ್ಲಿ ಅಬ್ದುಲ್‌ ಅಜೀಜ್‌ ಎಂಬುವವರಿಗೆ ಮಾರಾಟ ಮಾಡಿದ್ದಾರೆ.ಕನೀಜ್‌ ಫಾತಿಮಾ ಅವರ ಹೆಸರು ಒತ್ತುವರಿದಾರರ ಪಟ್ಟಿಯಲ್ಲಿ ಪ್ರಕಟಗೊಂಡಿದ್ದು, 2026ರ ಜ.6 ರಂದು ಕಲಬುರಗಿ ಜಿಲ್ಲಾ ವಕ್ಫ್‌ ಅಧಿಕಾರಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಒತ್ತುವರಿದಾರರ ಪಟ್ಟಿ ಸಲ್ಲಿಸಿದ್ದಾರೆ ಎಂದು ದೂರಿದ್ದಾರೆ.

ಇದರಲ್ಲಿ ಕನಿಜ್‌ ಫಾತಿಮಾ (ಮಾರಾಟಗಾರರು) ಹಾಗೂ ಅಬ್ದುಲ್‌ ಅಜೀಜ್‌ (ಖರೀದಿದಾರರು) ಇಬ್ಬರನ್ನೂ ಒತ್ತುವರಿದಾರರ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಹೀಗಿದ್ದರೂ ಈವರೆಗೆ ವಕ್ಫ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ನಿರ್ಲಕ್ಷ್ಯ ವಹಿಸಿದ ಅಧಿಕಾರಿಗೆ ಹೊಣೆ ಆರೋಪ:

ಇನ್ನು ಈ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್‌ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಒತ್ತುವರಿ ಕುರಿತು ಜಿಲ್ಲಾ ವಕ್ಫ್‌ ಅಧಿಕಾರಿ ವರದಿ ನೀಡಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿರುವ ಆರೋಪ ಎದುರಿಸುತ್ತಿರುವ ವಕ್ಫ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಂದಲೇ ಶಾಮ್ಲಾ ಇಕ್ಬಾಲ್‌ ವರದಿ ಕೇಳಿದ್ದಾರೆ. ಆರೋಪ ಎದುರಿಸುತ್ತಿರುವವರಿಂದಲೇ ವರದಿ ಕೇಳುವ ಬದಲು ಸ್ವತಂತ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಮರ್ಸ್ತ್‌ ಒತ್ತಾಯ ಮಾಡಿದ್ದಾರೆ. 

ದೂರುದಾರರ ಆರೋಪವೇನು?: 

ಕನಿಜ್‌ ಫಾತಿಮಾ ಅವರು ವಕ್ಫ್‌ ಆಸ್ತಿಯನ್ನು ಕಾನೂನು ಬಾಹಿರವಾಗಿ ಖರೀದಿ ಮಾಡಿ ಮಾರಾಟ ಮಾಡಿದ್ದಾರೆ. ಅವರಿಗೆ ಈವರೆಗೆ ಯಾವುದೇ ನೋಟಿಸ್‌ ನೀಡಿಲ್ಲ ಅಥವಾ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸ್ವತಂತ್ರ ವರದಿ ಪಡೆಯಲು ಸರ್ಕಾರ ವಿಫಲವಾಗಿದೆ. ವಿಪರ್ಯಾಸವೆಂದರೆ ಒತ್ತುವರಿದಾರರೇ ವಕ್ಫ್‌ ಮಂಡಳಿ ಸದಸ್ಯರಾಗಿದ್ದಾರೆ. ಅವರ ಮೇಲೆ ಇಷ್ಟು ಸುದೀರ್ಘ ಕಾಲ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ವಕ್ಫ್‌ ಆಡಳಿತದ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೈಯದ್‌ ಹಬೀಬ್‌ ಸರ್ಮಸ್ತ್‌ ದೂರಿದ್ದಾರೆ.

ಪ್ರತಿಕ್ರಿಯೆಗೆ ಸಿಗದ ಶಾಮ್ಲಾ ಇಕ್ಬಾಲ್‌:

ಶಾಸಕರು, ವಕ್ಫ್‌ ಮಂಡಳಿ ಸದಸ್ಯರ ವಿರುದ್ಧವೇ ದೂರು ಬಂದರೂ ಇಲಾಖೆ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್‌ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆ ಪಡೆಯಲು ‘ಕನ್ನಡಪ್ರಭ’ ಸತತವಾಗಿ ಪ್ರಯತ್ನಿಸದರೂ ಅವರು ಕರೆ ಸ್ವೀಕರಿಸಲಿಲ್ಲ, ಎಸ್‌ಎಂಎಸ್‌ಗೂ ಪ್ರತಿಕ್ರಿಯಿಸಿಲ್ಲ.