ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಅಲ್ಲಿ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಿಸಿದ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಿತು.ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ರೈತರ ಹಕ್ಕು ಕಸಿದುಕೊಳ್ಳುವ ಯತ್ನ:ಈ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಅಧಿಕಾರ ಮದ ಹಾಗೂ ರಿಯಲ್ ಎಸ್ಟೇಟ್ ದಂಧೆಗಾಗಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಹರಿಹಾಯ್ದರು.
ಬಿಡದಿ ಭಾಗದಲ್ಲಿ ರೈತರ ಫಲವತ್ತಾದ ಜಮೀನನ್ನು ಕಿತ್ತುಕೊಂಡು ಟೌನ್ ಶಿಪ್ ಮಾಡಲು ಹೊರಟಿರುವ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಸರ್ಕಾರಿ ಜಮೀನುಗಳು ಲಭ್ಯವಿದ್ದರೂ ಕೇವಲ ರಿಯಲ್ ಎಸ್ಟೇಟ್ ದಂಧೆ ಹಾಗೂ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ಬಡ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋರಾಟ:
ಈ ಭ್ರಷ್ಟ ಹಾಗೂ ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಜನರ ಹಿತವನ್ನು ಮರೆತು ತುಘಲಕ್ ದರ್ಬಾರ್ ನಡೆಸುತ್ತಿರುವ ಈ ಸರ್ಕಾರಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಯಡಿಯೂರಪ್ಪ ಗುಡುಗಿದರು.ಶೋಭಾ ಕರಂದ್ಲಾಜೆ ಮಾತನಾಡಿ, ಬಿಡದಿ ಭಾಗದ ರೈತರ ನೋವು, ಭಾವನೆ, ಸಂಕಷ್ಟ, ಅಭಿಪ್ರಾಯವನ್ನು ತಿಳಿದುಕೊಳ್ಳುವ ಗೋಜಿಗೆ ಸರ್ಕಾರ ಹೋಗಿಲ್ಲ. ಬೆಂಗಳೂರಿಗೆ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯಾಕೆ ಬೇಕು? ಬನಶಂಕರಿ ಆರನೇ ಸ್ಟೇಜ್, ಕೆಂಪೇಗೌಡ ಲೇಔಟ್, ವಿಶ್ವೇಶ್ವರಯ್ಯ ಬಡಾವಣೆ, ಶಿವರಾಮ ಕಾರಂತ ಬಡಾವಣೆಗೆ ಜನ ಬಂದಿರುವರೇ ಎಂಬುನ್ನು ಸರ್ಕಾರ ಉತ್ತರ ಕೊಡಲಿ. ಅಲ್ಲೆಲ್ಲ ಮೂಲ ಸೌಕರ್ಯ ಕೊಟ್ಟಿದ್ದೀರಾ? ಇದು ಭೂಮಾಫಿಯ, ರೈತವಿರೋಧಿ, ಮಹಿಳಾ ವಿರೋಧಿ ಸರ್ಕಾರ. ದೇಶ ವಿರೋಧಿಗಳ ಕೇಸನ್ನು ವಾಪಸ್ ಪಡೆಯುವ ಸರ್ಕಾರ ಎಂದು ಕಿಡಿಕಾರಿದರು.ರಾಜ್ಯದ ಜಲಾಶಯಗಳು ಬತ್ತಿ ಹೋಗಿ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದರೂ ಮುಖ್ಯಮಂತ್ರಿ ಹಾಗೂ ಸಚಿವರು ಜನರ ಕಷ್ಟ ಕೇಳುವ ಬದಲು ಮಂತ್ರಿಮಂಡಲ ವಿಸ್ತರಣೆಗಾಗಿ ದೆಹಲಿ ವಾರಕ್ಕೆರಡು ಬಾರಿ ಓಡಾಡುತ್ತಿದ್ದಾರೆ.
ಪ್ರತಿಭಟನೆ ನಡೆಸಿದ ರೈತರು ಹಾಗೂ ಮಹಿಳೆಯರ ಮೇಲೆ ದರ್ಪದಿಂದ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ಮುಂದಿನ 24 ಗಂಟೆಗಳಲ್ಲಿ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಅಜೀರ್ಣ ಆಗುವಷ್ಟು ಬಹುಮತ ಇದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಜಾತಿ ವಿಷ ಬೀಜ ಬಿತ್ತಿ ಏನು ಬೇಕಾದರು ಸಾಧಿಸಬಹುದು ಎಂಬ ಭ್ರಮೆಯಲ್ಲಿದ್ದಾರೆ. ಭೀಕರ ಬರಗಾಲ ಇದೆ. ರಾಜ್ಯದ ಜನರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಜನರು ಕರೆಯುವ ಯಾವ ಜಿಲ್ಲೆಗೆ ಬೇಕಿದ್ದರೂ ಬಂದು ನಾನು ಹೋರಾಟ ಮಾಡುತ್ತೇನೆ. ನಾಡಿನ ಭವಿಷ್ಯಕ್ಕಾಗಿ ಈ ಸರ್ಕಾರ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.