ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗುತ್ತಿರುವ ವಿದ್ಯಾರ್ಥಿಗಳ ಸಾಧನೆಯು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ದಿನೇಶ್ ಹೇಳಿದರು. ತಾಲೂಕಿನ ಶ್ರವಣಬೆಳಗೊಳದ ಎಸ್. ಎನ್. ಪಿಯು ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಪರಿಶ್ರಮ, ಶಿಸ್ತು ಹಾಗೂ ಗುರಿಯೊಂದಿಗೆ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಯಶಸ್ಸು ಕಾಲೇಜಿನ ಹೆಮ್ಮೆಯಾಗಿದ್ದು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಅವರ ಸಾಧನೆಯನ್ನು ಮಾದರಿಯಾಗಿ ತೆಗೆದುಕೊಂಡು ಈಗಿನಿಂದಲೇ ಯೋಜಿತವಾಗಿ ಓದಿನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಪ್ರತಿಭಾ ಪುರಸ್ಕಾರವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಇನ್ನಷ್ಟ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಸಾಮರ್ಥ್ಯದೊಂದಿಗೆ ಶ್ರಮಿಸಿದರೆ ಉತ್ತಮ ಅಂಕಗಳೊಂದಿಗೆ ಉನ್ನತ ಸಾಧನೆ ಮಾಡಬಹುದು ಎಂದು ಅವರು ತಿಳಿಸಿದರು.ಕಾಲೇಜಿನ ಆಡಳಿತಾಧಿಕಾರಿ ಡಾ. ರಾಜಕಿರಣ್ ಬಲ್ಲಾಳ್ ಮಾತಾನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಅವರ ಕಲಿಕೆಯ ಜೊತೆಗೆ ಪೋಷಕರ ನಿರಂತರ ಸಹಕಾರ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವೂ ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರ ಪಾತ್ರದಷ್ಟೇ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಮನೆಯಲ್ಲಿ ಓದಿಗೆ ಅನುಕೂಲಕರ ವಾತಾವರಣ ಕಲ್ಪಿಸಿ, ಮಕ್ಕಳ ಕಲಿಕೆಯ ಬಗ್ಗೆ ನಿರಂತರವಾಗಿ ಗಮನಹರಿಸಿದರೆ ಅವರು ಉತ್ತಮ ಅಂಕಗಳನ್ನು ಗಳಿಸಿ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ತಿಳಿಸಿದರು.ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಅಧ್ಯಯನದೊಂದಿಗೆ ನಿರಂತರ ಪುನರಾವರ್ತನೆ, ಮಾದರಿ ಪರೀಕ್ಷೆಗಳ ಅಭ್ಯಾಸ ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸ್ಪಷ್ಟ ಗುರಿ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಯಾವುದೇ ಸಾಧನೆ ಅಸಾಧ್ಯವಲ್ಲ. ಸಮಯದ ಸದ್ಬಳಕೆ ಮಾಡಿಕೊಂಡು ಶಿಸ್ತು, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಅಧ್ಯಯನ ನಡೆಸಬೇಕು. ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರದೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಹೇಳಿದರು.ಶ್ರೀ ಬಾಹುಬಲಿ ಶಿಕ್ಷಣ ಸಂಸ್ಥೆಯ ಸದಸ್ಯ ಹೇಮಂತ್ ಜೈನ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದ ಗುರಿಯನ್ನು ಸಾಧಿಸಲು ಪಿಯುಸಿ ಶಿಕ್ಷಣವು ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಸಮಯದ ಸದ್ಬಳಕೆಗೆ ಆದ್ಯತೆ ನೀಡಬೇಕು. ಈ ಹಂತದಲ್ಲಿ ರೂಪಿಸಿಕೊಳ್ಳುವ ಅಧ್ಯಯನದ ಅಭ್ಯಾಸವೇ ಮುಂದಿನ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಭದ್ರ ಬುನಾದಿಯಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ತನುಶ್ರೀ, ನಯನ, ತನುಶ್ರೀ ಬಾಹುಬಲಿ, ಮೋನಿಕಾ ಹಾಗೂ ನಿಶಾ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜತೆಗೆ ಶೇ. ೧೦೦ರಷ್ಟು ಫಲಿತಾಂಶ ಪಡೆದ ವಿಷಯಗಳ ಉಪನ್ಯಾಸಕರಾದ ಮುರಳಿ ಹಾಗೂ ದೀಪ ಅವರಿಗೆ ಗೌರವ ಸಲ್ಲಿಸಲಾಯಿತು. ಹಾಗೂ ವೀರಗಾಸೆ ನೃತ್ಯ ಪ್ರದರ್ಶನ ಮಾಡಿದ ಹಳೆಯ ವಿದ್ಯಾರ್ಥಿ ಶರತ್ ಅವರಿಗೆ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಬಾಹುಬಲಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲೆ ಪವಿತ್ರ, ಕನ್ನಡ ಸಾಹಿತ್ಯ ಪರಿಷತ್ ಶ್ರವಣಬೆಳಗೊಳ ಘಟಕದ ಅಧ್ಯಕ್ಷ ನಾಗೇಂದ್ರ ರಾಯ, ಶ್ರೀ ಕೂಷ್ಮಾಂಡಿನಿ ಮಹಿಳಾ ಸಮಾಜದ ಕಾರ್ಯದರ್ಶಿ ಪುಷ್ಪಲತಾ ಇದ್ದರು.

----

ಫೋಟೋ:

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ತನುಶ್ರೀ, ನಯನ, ತನುಶ್ರೀ ಬಾಹುಬಲಿ, ಮೋನಿಕಾ ಹಾಗೂ ನಿಶಾ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.