ಡಿಕೆಶಿ ಆಡಿರುವ ಮಾತು ಕಾಂಗ್ರೆಸ್ಸಿನ ಮನಸ್ಥಿತಿ -ಸಂಸದ ಬೊಮ್ಮಾಯಿ

| Published : Oct 13 2025, 02:02 AM IST

ಸಾರಾಂಶ

ಶಾಸಕ ಮುನಿರತ್ನ ಅವರು ಹಾಕಿದ್ದ ಆರ್‌ಎಸ್‌ಎಸ್ ಟೋಪಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಶಾಸಕ ಮುನಿರತ್ನ ಅವರು ಹಾಕಿದ್ದ ಆರ್‌ಎಸ್‌ಎಸ್ ಟೋಪಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಬಂಕಾಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಗಾಂಧಿ ಟೋಪಿಯನ್ನು ಕಾಂಗ್ರೆಸ್ ಟೋಪಿಯನ್ನಾಗಿ ಮಾಡಿಕೊಂಡು ಅದಕ್ಕೆ ಅವಮಾನ ಮಾಡಿದ್ದರು. ಈಗ ಆರ್‌ಎಸ್‌ಎಸ್ ಟೋಪಿಗೆ ಅವಮಾನ ಮಾಡಿದ್ದಾರೆ. ಅದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು. ಗಣೇಶನ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಿದವರ ವಿರುದ್ಧ ಹಾಕಿರುವ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಅವರು, ಡಿಜೆ ಬಳಕೆ ವಿಚಾರದಲ್ಲಿ ಹೈಕೋರ್ಟ್ ನಿರ್ದಿಷ್ಟ ಡೆಸಿಬಲ್ ಮೀರದಂತೆ ನಿರ್ದೇಶನ ನೀಡಿದೆ. ಅದನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರದ ನಿಯಮದ ಪ್ರಕಾರ ರಾತ್ರಿ 10 ಗಂಟೆಯ ಮೇಲೆ ಬೆಳಗಿನ ನಾಲ್ಕು ಗಂಟೆಯ ಮುಂಚೆ ಸ್ಪೀಕರ್ ಹಚ್ಚಬಾರದು ಅಂತ ಇದೆ. ಆದರೆ, ಕೆಲವರು ಸ್ಪೀಕರ್ ಹಚ್ಚುತ್ತಾರೆ. ನಾವು ಅದನ್ನು ಧಾರ್ಮಿಕ ಕಾರ್ಯಕ್ರಮ ಅಂತ ಸುಮ್ಮನಾಗುತ್ತೇವೆ. ಸರ್ಕಾರ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಸರ್ಕಾರ ಸರಿಯಾಗಿ ನಡೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರ ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಮಾಡಿದಾಗ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದರು.