ಚುನಾವಣೆ ಬಂದಾಗಷ್ಟೆ ರಾಜಕೀಯ ಪಕ್ಷಗಳಿಗೆ ಸಹಕಾರಿ ಕ್ಷೇತ್ರದ ಧ್ಯಾನ: ಶಿವಶಂಕರಪ್ಪ

KannadaprabhaNewsNetwork | Published : Jul 14, 2024 1:33 AM

ಸಾರಾಂಶ

ಶಿರಾಳಕೊಪ್ಪ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ, ಆಡಳಿತ ಮಂಡಳಿ ಶಿವಶಂಕರಪ್ಪನವರನ್ನು ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ಸಹಕಾರಿ ಸಂಘಗಳ ಅಭಿವೃದ್ಧಿ ಹಾಗೂ ಕಷ್ಟ -ಸುಖಗಳನ್ನು ಕೇಳದ ರಾಜಕೀಯ ಪಕ್ಷಗಳು ಸಹಕಾರಿ ಸಂಘಗಳ ಚುನಾವಣೆ ಬಂದಾಗ ಪಕ್ಷಗಳ ಹೆಸರನ್ನು ಹೇಳಿ ಮತ ಯಾಚಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪ್ರತಿಯೊಬ್ಬ ಸಹಕಾರಿಗಳು ಯೋಚಿಸಬೇಕು ಎಂದು ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಶಂಕರಪ್ಪ ಪ್ರಶ್ನಿಸಿದರು.

ಶಿರಾಳಕೊಪ್ಪ ಪಟ್ಟಣದ ವೆಂಕಟೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ತಾಲ್ಲೂಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಹಾಲು ಉತ್ಪಾದಕರ ಸಹಯೋಗದಲ್ಲಿ ಇತರ ಸಹಕಾರ ಕ್ಷೇತ್ರದಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ಚುನಾಯಿತ ರಾದ ಟಿ.ಶಿವಶಂಕರಪ್ಪ ಅವರಿಗೆ ನಡೆಸಲಾದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ೧೨೭ ಸಂಘಗಳು ಇದ್ದು, ಸಹಕಾರಿ ಕ್ಷೇತ್ರವನ್ನು ಬಲಗೊಳಿಸಲು ಇದು ಸಹಕಾರಿಯಾಗಿದೆ. ಪ್ರತಿದಿನ ೧ಲಕ್ಷ ೩೫ ಸಾವಿರ ಲೀ. ಹಾಲನ್ನು ಸಂಗ್ರಹಿಸುತ್ತಿವೆ. ನಾವು ಚುನಾವಣೆಗೆ ಸ್ಪರ್ಧಿಸುವವರು ಮತ ಕೇಳುವಾಗ ಅವರ ಕಷ್ಟ ಸುಖದಲ್ಲಿ ಸ್ಪಂದಿಸಿದರೆ ಹಾಗೂ ಈ ಹಿಂದೆ ಸಂಘಗಳ ಅಭಿವೃದ್ಧಿಗೆ ಶ್ರಮಿಸಿದರೆ ಅವರೂ ಮತ ಹಾಕುತ್ತಾರೆ. ಅದನ್ನು ಬಿಟ್ಟು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಚುನಾವಣೆ ಬಂದಾಗ ಮತ ಕೇಳುವುದಕ್ಕೆ ಬರುತ್ತವೆ. ಸಹಕಾರಿ ಕ್ಷೇತ್ರ ಬಲಗೊಳ್ಳಬೇಕೆಂದರೆ ಅದು ರಾಜಕೀಯದಿಂದ ದೂರವಿರಬೇಕು. ಮತಕೇಳಲು ಬಂದಾಗ ಅವರನ್ನು ಪ್ರಶ್ನಿಸಬೇಕು ಆಗ ಮಾತ್ರ ನಾವು ನಿಜವಾದ ಸಹಕಾರಿಗಳಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ವಿದ್ಯಾಧರ್, ಶಿಮೂಲ್ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರೇಗೌಡ ಗೌರವ ಸ್ವೀಕರಿಸಿ ಮಾತನಾಡಿದರು. ಇನ್ನು, ನಿರ್ದೇಶಕ ಲಕ್ಷ್ಮಣಪ್ಪ, ಶಿವಾನಂದಪ್ಪ, ಪ್ರಾಸ್ತಾವಿಕವಾಗಿ ಬಸವನಗೌಡ ಮಾತನಾಡಿದರು.

ಕಾರ್ಯಕ್ಮದ ಅಧ್ಯಕ್ಷತೆಯನ್ನು ಶಿಕಾರಿಪುರ ತಾಲೂಕು ಹಾಲು ಉತ್ಪದಕ ಸಂಘದ ಅಧ್ಯಕ್ಷ ಶುಭಕರ್ ವಹಿಸಿದ್ದರು. ವೇದಿಕೆ ಮೇಲೆ ಸೊರಬ ಮತ್ತು ಶಿಕಾರಿಪುರ ತಾಲ್ಲೂಕ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

Share this article