ಜಗತ್ತಿಗೇ ದಾರಿ ದೀಪವಾದ ತಪಸ್ವೀ ಡಾ.ಅಂಬೇಡ್ಕರ್: ಶಂಕರ ದೇವನೂರು

KannadaprabhaNewsNetwork |  
Published : Jan 28, 2026, 01:15 AM IST
29 | Kannada Prabha

ಸಾರಾಂಶ

ಅಂಬೇಡ್ಕರ್ ಅವರು ದಲಿತರಿಗೆ ಸೀಮಿತವಾಗಿ ಚಿಂತನೆ ಮಾಡಿದವರಲ್ಲ. ದಲಿತರನ್ನು ಕೇಂದ್ರವಾಗಿರಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಗೆ ಬದ್ಧವಾದ ಜನರನ್ನುಳ್ಳ ಸಮಾಜ ನಿರ್ಮಿಸುವುದು ಅವರ ಧ್ಯೇಯವಾಗಿತ್ತು. ಭಾರತವು ಸಾವಿರಾರು ವರ್ಷ ಇತಿಹಾಸವುಳ್ಳ ಬಹುಸಂಸ್ಕೃತಿಯ ನಾಡು ಎಂಬುದು ಅವರಿಗೆ ತಿಳಿದಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಸಮಾಜ ನಿರ್ಮಿಸುವ ನಿಟ್ಟಿನಲ್ಲಿ ತಮಗೆದುರಾದ ಕಷ್ಟಗಳನ್ನೇ ಪರಿವರ್ತಿಸಿಕೊಂಡು ಜಗತ್ತಿಗೇ ದಾರಿದೀಪವಾದ ತಪಸ್ವೀ ಡಾ.ಬಿ.ಆರ್.ಅಂಬೇಡ್ಕರ್ ಎಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಿಳಿಸಿದರು.

ನಗರದ ಅರಮನೆ ಜಪದಕಟ್ಟೆ ಮಠದ ಶ್ರೀ ಶಂಕರ ವಿಲಾಸ ಸಂಸ್ಕೃತ ಕಾಲೇಜಿನಲ್ಲಿ ಕರ್ನಾಟಕ ಸಂಸ್ಕೃತ ವಿವಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ವಿಚಾರಧಾರೆಗಳ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಸಾಮರ್ಥ್ಯದ ಕಮಲ, ಜ್ಞಾನಕ್ಕೆ ದಾಸ. ಎದೆಯ ಬೆಂಕಿಗೆ ಸುರಿದ ತುಪ್ಪವನ್ನೇ ಉರಿಸಿ ಜ್ಞಾನದ ಜ್ವಾಲೆಯಿಂದ ಆವಿರ್ಭವಿಸಿದ ಸಂತನಂತೆ ಜಗತ್ತಿಗೇ ಬೆಳಕಾಗಬಲ್ಲ ಭಾರತೀಯ ಸಂವಿಧಾನವನ್ನು ನೀಡಿದವರು ಬಾಬಾ ಸಾಹೇಬ್ ಎಂದರು.

ಅಂಬೇಡ್ಕರ್ ಅವರು ದಲಿತರಿಗೆ ಸೀಮಿತವಾಗಿ ಚಿಂತನೆ ಮಾಡಿದವರಲ್ಲ. ದಲಿತರನ್ನು ಕೇಂದ್ರವಾಗಿರಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಗೆ ಬದ್ಧವಾದ ಜನರನ್ನುಳ್ಳ ಸಮಾಜ ನಿರ್ಮಿಸುವುದು ಅವರ ಧ್ಯೇಯವಾಗಿತ್ತು. ಭಾರತವು ಸಾವಿರಾರು ವರ್ಷ ಇತಿಹಾಸವುಳ್ಳ ಬಹುಸಂಸ್ಕೃತಿಯ ನಾಡು ಎಂಬುದು ಅವರಿಗೆ ತಿಳಿದಿತ್ತು ಎಂದರು.

ದೇಶವೆಂದರೆ ಪ್ರತಿಯೊಬ್ಬರೂ ಮಾನದಿಂದ ಬದುಕುವ, ಗೌರವದಿಂದ ಜೀವನ ಸಾಗಿಸುವ ಸಮಾಜವಾಗಬೇಕು. ಹೊರತು ಜಾತಿ- ಮತ, ಹಣ- ಅಧಿಕಾರದ ಕುಬ್ಜ ಮನಸ್ಸಿನ ಕಿತ್ತಾಟವಲ್ಲ. ದುರದೃಷ್ಟವಶಾತ್ ಬಹುಕಾಲದಿಂದ ನಮ್ಮ ದೇಶದಲ್ಲಿ ಇದೇ ನಡೆದು ಬಂದಿದೆ. ಅಂಬೇಡ್ಕರ್ ಅವರು ಕೇವಲ ದಲಿತರು ಮಾತ್ರವಲ್ಲ ಎಲ್ಲ ವರ್ಗದ ಜನರೂ ಏಳಿಗೆ ಹೊಂದಬೇಕು ಎಂಬ ಆದರ್ಶಪ್ರಾಯವಾದ ದಾರಿಯನ್ನು ನಮಗೆ ತೋರಿಸಿದ್ದಾರೆ. ಮುಂದಿನ ಪೀಳಿಗೆ ಅಂಬೇಡ್ಕರ್ ಅವರ ಚೈತನ್ಯಶಿಲ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ. ರಂಗೇಗೌಡ ಮಾತನಾಡಿ, ಪಾಶ್ಚಾತ್ಯ ಸಮಾಜಗಳ ಜೀವನ ವಿಧಾನ, ಮುಕ್ತ ವ್ಯವಸ್ಥೆಗಳು ಭಾರತದ ಜನರಿಗೂ ಲಭ್ಯವಾಗಬೇಕು, ಆ ಮೂಲಕ ಭಾರತೀಯ ಸಮಾಜ ಪರಿವರ್ತನಶೀಲವಾಗಬೇಕು ಎಂದು ಡಾ. ಅಂಬೇಡ್ಕರ್ ಬಹುವಾಗಿ ಶ್ರಮಿಸಿದರು. ಇದರ ಪರಿಣಾಮವೇ ಇಂದು ಹಳ್ಳಿಗಾಡಿನ ವ್ಯಕ್ತಿಯಾದ ನಾನು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಗಿದೆ. ಸೂಕ್ಷ್ಮ ಮನಸ್ಸಿದ್ದವರಿಗೆ ಮಾತ್ರ ಅಸ್ಪೃಶ್ಯತೆಯ ನೋವು ಅರಿವಿಗೆ ಬರುತ್ತದೆ ಎಂದರು.

ಅರಮನೆ ಜಪದಕಟ್ಟೆ ಮಠದ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅನಸೂಯ ದೇವನೂರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಸಂಸ್ಕೃತ ವಿವಿ ಪ್ರಸಾರಾಂಗ ಉಪ ನಿರ್ದೇಶಕ ಡಾ.ಬಿ. ಗೋವಿಂದ, ಪ್ರಾಂಶುಪಾಲ ಶ್ರೀನಿವಾಸಮೂರ್ತಿ, ಮುಖ್ಯೋಪಾಧ್ಯಾಯಿನಿ ಎಲ್. ಪಂಕಜಾಕ್ಷಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ