ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ: ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ 31ನೇ ಅಧ್ಯಕ್ಷರಾಗಿ ಮಹಮ್ಮದ್ ಅಸ್ಗರ್ (ಮುನ್ನಾ) ಶನಿವಾರ ಅಧಿಕಾರ ಸ್ವೀಕರಿಸಿದರು.ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಮೊದಲಿಗೆ ಮುಸ್ಲಿಂ ಧರ್ಮ ಗುರುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾಧಿಕಾರದ ಆಯುಕ್ತ ಎಂ.ಎಚ್.ರಿತೇಶ್ ಅವರಿಂದ ಮಹಮದ್ ಅಸ್ಗರ್ ಅಧಿಕಾರ ವಹಿಸಿಕೊಂಡರು. ಪ್ರಾಧಿಕಾರದ ಕಡತಕ್ಕೆ ಸಹಿ ಹಾಕುವ ಮೂಲಕ ಅಧಿಕೃತವಾಗಿ ಅಧ್ಯಕ್ಷ ಪದವಿಯನ್ನು ಸ್ವೀಕಾರ ಮಾಡಿದರು.
ನಗರದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ: ಚುಡಾ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಹಮ್ಮದ್ ಅಸ್ಗರ್ ಮಾತನಾಡಿ, ಕಾಂಗ್ರೆಸ್ ಪಕ್ಷ ತಮ್ಮನ್ನು ಗುರುತಿಸಿ ಚಾಮರಾಜನಗರ- ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ 31ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದು, ಕಳೆದ 8 ವರ್ಷಗಳಿಂದ ಬ್ಲಾಕ್ ಅಧ್ಯಕ್ಷನಾಗಿ ದುಡಿದಿದ್ದೇನೆ. ಬ್ಲಾಕ್ ವ್ಯಾಪ್ತಿಯ ಕಾರ್ಯಕರ್ತರು ಹಾಗೂ ಮುಖಂಡರ ಸಹಕಾರದಿಂದ ಹೆಚ್ಚು ಕೆಲಸ ಮಾಡಲು ಹಾಗೂ ಪಕ್ಷದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಸುನೀಲ್ ಬೋಸ್, ಶಾಸಕರಾದ ಸಿ.ಪುಟ್ಟರಂಗಶೆಟ್ಟರು, ಎ.ಆರ್.ಕೃಷ್ಣಮೂರ್ತಿ ಹಾಗೂ ಗಣೇಶ್‌ಪ್ರಸಾದ್, ಮಾಜಿ ಶಾಸಕರು, ಮಾಜಿ ಸಂಸದರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು, ಮುಖಂಡರಿಗೆ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಚಾಮರಾಜನಗರ ಪಟ್ಟಣ ಅಭಿವೃದ್ದಿ ಮಾಡುವುದು ನನ್ನ ಗುರಿ. ಅಭಿವೃದ್ದಿ ಪ್ರಾಧಿಕಾರದಲ್ಲಿ 2021-22ನೇ ಸಾಲಿನಲ್ಲಿ ಮಾಸ್ಟರ್‌ಪ್ಲಾನ್ ಮಾಡಲಾಗಿತ್ತು. ಇದನ್ನು 2024-25ನೇ ಸಾಲಿಗೆ ಮಾರ್ಪಾಡು ಮಾಡಿಕೊಂಡು ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ಮಾಸ್ಟರ್ ಪ್ಲಾನ್ ಸಿದ್ದಪಡಿಸಿಕೊಂಡು ನಗರದ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಲು ಅನುಮೋದನೆ ಪಡೆದುಕೊಂಡು ಮಾದರಿ ನಗರವನ್ನಾಗಿ ಮಾಡಲು ಹಾಗೂ ಎಲ್ಲರಿಗೂ ಸೂರು ಮತ್ತು ನಿವೇಶನ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆದಷ್ಟು ನಗರವನ್ನು ಸಂಕೀರ್ಣದಿಂದ ವಿಸ್ತರಣೆ ಮಾಡಲು ಹೊಸ ಬಡಾವಣೆಗಳ ನಿರ್ಮಾಣಕ್ಕೆ ನಗರಾಭಿವೃದ್ದಿ ಪ್ರಾಧಿಕಾರದಿಂದ ಹೆಚ್ಚಿನ ಉತ್ತೇಜನ, ಸಹಕಾರವನ್ನು ನೀಡುತ್ತೇನೆ ಎಂದರು. ಚುಡಾ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಹಮ್ಮದ್ ಅಸ್ಗರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಪಕ್ಷದ ಮುಖಂಡರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಟಿ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಉಮೇಶ್, ಬ್ಲಾಕ್ ಕಾಂಗ್ರೆಸ್ ಅರಕಲವಾಡಿ ಗುರುಸ್ವಾಮಿ, ಕಾಗಲವಾಡಿ ಚಂದ್ರು, ಸ್ವಾಮಿ, ಉದ್ಯಮಿ ಎ.ಜಯಸಿಂಹ, ಪದ್ಮಪುರುಷೋತ್ತಮ್, ಜಾನ್, ಎಎಚ್‌ಎನ್ ನಸ್ರುಲ್ಲಾ, ಜಿಲ್ಲಾ ಮಹಿಳಾ ಅದ್ಯಕ್ಷೆ ಲತಾ ಜತ್ತಿ, ತಾಪಂ ಮಾಜಿ ಸದಸ್ಯ ರಾಜು, ಇಂಜಿನಿಯರ್ ಸುಭಾಸ್, ಸ್ವಾಗತ್ ಟ್ರೇಡರ್ ರಮೇಶ್, ಕಾವೇರಿ ಶಿವಕುಮಾರ್, ರವಿಕುಮಾರ್ ಹಾಜರಿದ್ದರು.