ಬಾಕಿ ವೇತನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ

KannadaprabhaNewsNetwork |  
Published : Jul 26, 2026, 01:45 AM IST
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನಡುವೆ ಮಾತಿನ ಚಕುಮಕಿ ಸರ್ಕಾರ, ಇಲಾಖೆಯ ನಿರ್ಲಕ್ಷ್ಯ ದ ವಿರುದ್ದ ಆಕ್ರೋಶ | Kannada Prabha

ಸಾರಾಂಶ

ಕಳೆದ ಫೆಬ್ರವರಿ ತಿಂಗಳಿನಿಂದ (ಸುಮಾರು 6-7 ತಿಂಗಳುಗಳಿಂದ) ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಯಾಗಿಲ್ಲ. ಸಾಫ್ಟ್‌ವೇರ್ ಸಮಸ್ಯೆ/ಅಪ್‌ಡೇಟ್ ನೆಪ ಹೇಳಿ ವೇತನ ತಡೆಹಿಡಿಯಲಾಗಿದೆ.

ಸಭೆಗಳ ಹೆಸರಿನಲ್ಲಿ ಮೇಲಾಧಿಕಾರಿಗಳು ತೀವ್ರ ಕಿರುಕುಳ: ಆರೋಪ

ಕನ್ನಡಪ್ರಭ ವಾರ್ತೆ ಮಂಚೇನಹಳ್ಳಿಕಳೆದ 6ರಿಂದ 7 ತಿಂಗಳುಗಳಿಂದ ಗೌರವಧನ (ವೇತನ) ಬಿಡುಗಡೆಯಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಶಾ ಕಾರ್ಯಕರ್ತೆಯರು ಸರ್ಕಾರ ಹಾಗೂ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ ಸಂಘಟನೆಯ ಪ್ರಮುಖ ಆಶಾ ಕಾರ್ಯಕರ್ತೆ ಸರಸ್ವತಮ್ಮ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯ ಕಾರ್ಯವೈಖರಿ ಮತ್ತು ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ಕಳೆದ ಫೆಬ್ರವರಿ ತಿಂಗಳಿನಿಂದ (ಸುಮಾರು 6-7 ತಿಂಗಳುಗಳಿಂದ) ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಯಾಗಿಲ್ಲ. ಸಾಫ್ಟ್‌ವೇರ್ ಸಮಸ್ಯೆ/ಅಪ್‌ಡೇಟ್ ನೆಪ ಹೇಳಿ ವೇತನ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.6 ತಿಂಗಳು ಕಳೆದರೂ ಸಾಫ್ಟ್‌ವೇರ್ ಸರಿಪಡಿಸಲು ಸಾಧ್ಯವಾಗಿಲ್ಲವೇ? ಇಲಾಖೆಯ ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಬಡ ಆಶಾ ಕಾರ್ಯಕರ್ತೆಯರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್‌ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ನೌಕರರಿಗೆ ಪ್ರೋತ್ಸಾಹಧನ ಹೆಚ್ಚಳ ಮಾಡಲಾಗಿದೆ, ಆದರೆ ನಿರಂತರವಾಗಿ ಶ್ರಮಿಸುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಕಡೆಗಣಿಸಿದೆ. ನಾವು ಹೆಣ್ಣುಮಕ್ಕಳು ಅಲ್ವೇ? ನಮಗೇಕೆ ಈ ತಾರತಮ್ಯ? ಎಂದು ಸರ್ಕಾರವನ್ನು ಪ್ರಶ್ನಿಸಿದರು.ಕೆಲಸ ಮಾಡಲು ಸಾಧ್ಯವಿಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾವು ಯಾವುದೇ ಕಾರಣಕ್ಕೂ ಕೆಲಸ ಬಿಡುವುದಿಲ್ಲ, ಬದಲಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು ಸೇರಿ ₹5,000 ನೀಡಲಾಗುತ್ತಿದ್ದು, ತೀವ್ರ ಬೆಲೆಏರಿಕೆಯ ಈ ಕಾಲದಲ್ಲಿ ಮಕ್ಕಳಿಗೆ ಶಾಲಾ ಫೀಸ್ ಕಟ್ಟಲು ಹಾಗೂ ಜೀವನನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ₹10,000 ಗೌರವಧನ ನಿಗದಿಪಡಿಸಬೇಕೆಂದು ಆಗ್ರಹಿಸಿದರು.ಇದೇ ವೇಳೆ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಮಾತನಾಡಿ, ಸಮಗ್ರ ಸೇರಿದಂತೆ ಹಲವು ಆ್ಯಪ್‌ಗಳಲ್ಲಿ ಸರ್ವೇ ಹಾಗೂ ಮಾಹಿತಿ ನಮೂದಿಸಲು ಮೇಲಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಆದರೆ ಸರ್ಕಾರದಿಂದ ಯಾವುದೇ ಅಧಿಕೃತ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಸೌಲಭ್ಯ ನೀಡಿಲ್ಲ. ಸ್ವಂತ ಮೊಬೈಲ್‌ಗಳನ್ನು ಬಳಸಿ ಕೆಲಸ ಮಾಡಬೇಕಾದ ಸ್ಥಿತಿಯಿದ್ದು, ಫೋನ್ ಕೆಟ್ಟು ಹೋದರೆ ಯಾರುಹೊಣೆ, ಆರಂಭದಲ್ಲಿ ದಿನಕ್ಕೆ 2-3ಗಂಟೆಗಳ ಕೆಲಸವೆಂದು ಹೇಳಲಾಗಿತ್ತು. ಆದರೆ ಈಗ ಪ್ರತಿದಿನ 24 ಗಂಟೆಯೂ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳ ಭೇಟಿ, ಸರ್ವೇ, ಕಡ್ಡಾಯ ಸಭೆಗಳ ಹೆಸರಿನಲ್ಲಿ ಮೇಲಾಧಿಕಾರಿಗಳು ತೀವ್ರ ಕಿರುಕುಳ ನೀಡುತ್ತಿದ್ದಾರೆ. ಕೆಲಸ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಬರೆದುಕೊಟ್ಟು ಹೋಗಿ ಎಂದು ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. 17 ವರ್ಷಗಳಿಂದ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ. ಆಶಾ ಕಾರ್ಯಕರ್ತೆಯರಲ್ಲಿ ಕೆಲವೊಮ್ಮೆ ಒಗ್ಗಟ್ಟಿನ ಕೊರತೆ ಇರುವುದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸರ್ಕಾರ ಹಾಗೂ ಅಧಿಕಾರಿಗಳು, ನಮಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಸ್ಥಳಕ್ಕೆ ಡಿ.ಎಚ್.ಓ.ಚೇತನ್ ಭೇಟಿ ಸ್ಪಷ್ಟನೆ:

ಆಶಾ ಕಾರ್ಯಕರ್ತೆಯರಿಗೆ ಫೆಬ್ರವರಿ ಕೊನೆಯವರೆಗಿನ ಎಲ್ಲಾ ಗೌರವಧನ ಹಾಗೂ ಆಶಾ ಸಾಫ್ಟ್‌ವೇರ್ ಮೂಲಕ ನೀಡಬೇಕಾದ ಪಾವತಿಗಳನ್ನು ಮಾಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹5,000 ನಿಶ್ಚಿತ ಗೌರವಧನ ನೀಡಲಾಗುತ್ತದೆ. ಇದರೊಂದಿಗೆ ಅವರು ನಿರ್ವಹಿಸುವ ಕೆಲಸದ ಆಧಾರದ ಮೇಲೆ ಪ್ರೋತ್ಸಾಹಧನ ಸೇರಿ ತಿಂಗಳಿಗೆ ₹4,000, ₹5,000 ಹಾಗೂ ₹6,000 ವರೆಗೆ ಪಾವತಿಯಾಗುತ್ತಿದೆ. ಬಾಕಿ ಇರುವ ಮೂರು ತಿಂಗಳ ಎನ್‌ಎಚ್‌ಎಮ್ ಬಜೆಟ್ ಅನುದಾನ ಶೀಘ್ರದಲ್ಲೇ ಆಶಾ ಸಾಫ್ಟ್‌ವೇರ್‌ನಲ್ಲಿ ಬಿಡುಗಡೆಯಾಗಲಿದೆ. ಅನುದಾನ ಬಂದ ತಕ್ಷಣ ಪರಿಶೀಲಿಸಿ, ಒಂದು ವಾರದೊಳಗೆ ಅವರ ಖಾತೆಗೆ ವೇತನ ಜಮಾ ಮಾಡಲಾಗುವುದು.ಮೇಲಾಧಿಕಾರಿಗಳು ಅಥವಾ ವೈದ್ಯರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಅಥವಾ ನಿಂದಿಸಿದ್ದಾರೆ ಎಂಬ ದೂರುಗಳು ಇದುವರೆಗೆ ಬಂದಿಲ್ಲ. ಒಂದು ವೇಳೆ ಯಾವುದೇ ಅಧಿಕಾರಿ ಅಥವಾ ವೈದ್ಯರು ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರಿದರೆ ಅಥವಾ ನಿಂದಿಸಿದರೆ, ಲಿಖಿತ ದೂರು ನೀಡಿದ್ದಲ್ಲಿ ಪರಿಶೀಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಯಲ್ಲಿ ಸುಮಾರು 55ಆರೋಗ್ಯ ಕಾರ್ಯಕ್ರಮಗಳಿದ್ದು, ಪ್ರತಿಯೊಂದು ಕಾರ್ಯಕ್ರಮವೂ ಅತ್ಯಂತ ಮುಖ್ಯವಾಗಿದೆ.ಆಶಾ ಕಾರ್ಯಕರ್ತೆಯರು ಯೋಜನೆಗಳನ್ನು ಯೋಜನಾಬದ್ಧವಾಗಿ ನಿರ್ವಹಿಸಿದರೆ ಕೆಲಸದ ಒತ್ತಡವಾಗುವುದಿಲ್ಲ. ಮನೆಗಳಿಗೆ ಭೇಟಿ ನೀಡಿದಾಗ ಬಿಪಿ, ಶುಗರ್, ಕ್ಯಾನ್ಸರ್ ತಪಾಸಣೆ, ಗರ್ಭಿಣಿಯರ ಆರೈಕೆ, ಮಕ್ಕಳಿಗೆ ಲಸಿಕೆ ಮುಂತಾದ ಎಲ್ಲಾ ವಿವರಗಳನ್ನು ಒಂದೇ ಬಾರಿಗೆ ಸಂಗ್ರಹಿಸುವುದರಿಂದ ಸಮಯ ಉಳಿತಾಯವಾಗಲಿದ್ದು, ಕಾರ್ಯವೈಖರಿ ಸುಗಮವಾಗಲಿದೆ ಎಂದು ಸಲಹೆ ನೀಡಲಾಗಿದೆ ಎಂದು ಡಿ.ಎಚ್.ಓ.ಚೇತನ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣ: ಸುತ್ತೂರು ಶ್ರೀ ಬಣ್ಣನೆ
ನೀಟ್‌ ಪ್ರಕರಣ: ಹೊಸ ಫ್ಲೆಕ್ಸ್ ಮೂಲಕ ಬಿಜೆಪಿಗೆ ಕೈ ನಾಯಕರ ಕೌಂಟರ್‌