ಅಶೋಕೆಯ ಪುನರುತ್ಥಾನ ಶೀಘ್ರ ಕಾರ್ಯಾರಂಭ

KannadaprabhaNewsNetwork | Updated : Jan 07 2024, 04:59 PM IST

ಸಾರಾಂಶ

ಗೋಕರ್ಣ ಮಂಡಲಕ್ಕೆ ಶ್ರೀ ರಾಮಚಂದ್ರಾಪುರ ಮಠ ಮೂಲ. ಇದಕ್ಕೆ ಅಶೋಕೆ ಮೂಲ. ಅಶೋಕೆಗೆ ಮಲ್ಲಿಕಾರ್ಜುನ ಮೂಲ. ಹೀಗೆ ಅತಿರುದ್ರ ಸೇವೆ ಪಡೆಯುತ್ತಿರುವ ಮಲ್ಲಿಕಾರ್ಜುನ ಇಡೀ ನಮ್ಮ ಸಮಾಜಕ್ಕೆ ಸರ್ವಮೂಲ.

ಗೋಕರ್ಣ:ಮೂಲವನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆ. ಶಂಕರಾಚಾರ್ಯರು ಶ್ರೀ ರಘೂತ್ತಮ ಮಠವನ್ನು ಸ್ಥಾಪಿಸಿದ ಈ ಅಶೋಕೆಯ ಪುನರುತ್ಥಾನ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ಏಳು ದಿನಗಳಿಂದ ನಡೆಯುತ್ತಿರುವ ಅತಿರುದ್ರ ಅಭಿಷೇಕದ ಸಂದರ್ಭದಲ್ಲಿ ರುದ್ರಸೇವೆಗೆ ಉಪ್ಪಿನಂಗಡಿ ಮಂಡಲದಿಂದ ಆಗಮಿಸಿದ್ದ ಶಿಷ್ಯರನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.ಆದಿ ಗುರು ಶಂಕರರ ಸಂಕಲ್ಪದ ಫಲವಾಗಿ ನಮ್ಮ ಮಠದ ಅವಿಚ್ಛಿನ್ನ ಪರಂಪರೆ ಮುಂದುವರಿದಿದೆ. 

ಕಾರಣಾಂತರದಿಂದ ಮೂಲಮಠ ಸ್ಥಳಾಂತರಗೊಂಡು, ಮೂಲಮಠದ ಕುರುಹುಗಳು ಮಾತ್ರ ಇಂದು ನಮ್ಮ ಬಳಿ ಇದೆ. ಆದರೆ 20 ವರ್ಷಗಳ ಸತತ ಪರಿಶ್ರಮದ ಫಲವಾಗಿ ಮೂಲಮಠದ ಜಾಗ ನಮ್ಮ ಕೈಸೇರಿದೆ. ಅದರ ಪುನರ್ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಅಶೋಕೆಯ ಮೂಲ ಎನಿಸಿದ ಮಲ್ಲಿಕಾರ್ಜುನನಿಗೆ ಅತಿರುದ್ರ ಅಭಿಷೇಕ ನಡೆಯುತ್ತಿದೆ ಎಂದು ಹೇಳಿದರು.

ಇಡೀ ಗೋಕರ್ಣ ಮಂಡಲಕ್ಕೆ ಶ್ರೀ ರಾಮಚಂದ್ರಾಪುರ ಮಠ ಮೂಲ. ಇದಕ್ಕೆ ಅಶೋಕೆ ಮೂಲ. ಅಶೋಕೆಗೆ ಮಲ್ಲಿಕಾರ್ಜುನ ಮೂಲ. ಹೀಗೆ ಅತಿರುದ್ರ ಸೇವೆ ಪಡೆಯುತ್ತಿರುವ ಮಲ್ಲಿಕಾರ್ಜುನ ಇಡೀ ನಮ್ಮ ಸಮಾಜಕ್ಕೆ ಸರ್ವಮೂಲ ಎಂದು ಶ್ರೀಗಳು ಬಣ್ಣಿಸಿದರು.ಮರಕ್ಕೆ ಬೇರು ಮೂಲ. ಬೇರಿಗೆ ನೀರೆರೆದು ಪೋಷಿಸಿದರೆ ಮಾತ್ರ ರೆಂಬೆ ಕೊಂಬೆಗಳು ಚಿಗುರಿ, ಹೂವು, ಹಣ್ಣು ನಿರೀಕ್ಷಿಸಬಹುದು. ಹಾಗೆಯೇ ಮೂಲಕ್ಕೆ ಮೂಲವಾದ ಮಲ್ಲಿಕಾರ್ಜುನನನ್ನು ಸಂತೃಪ್ತಗೊಳಿಸಿದರೆ ಇಡೀ ಸಮಾಜಕ್ಕೆ ಅದರ ಫಲ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿವ ಅಭಿಷೇಕ ಪ್ರಿಯ. ಅತಿರುದ್ರದಿಂದ ಸಂಪ್ರೀತನಾದ ಶಿವ ನಮ್ಮೆಲ್ಲರ ಬದುಕು ಅರಳಿ ನಳನಳಿಸುವಂತೆ ಮಾಡಲಿ. ಲಿಂಗ ಕೇವಲ ಶಿಲೆಯಲ್ಲ; ಸಾಲಿಗ್ರಾಮ ಕಲ್ಲಲ್ಲ. ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರೆ ಅದು ಶಿವನನ್ನು ತಲುಪುತ್ತದೆ ಎನ್ನುವುದಕ್ಕೆ ಮಲ್ಲಿಕಾರ್ಜುನನ ನಿದರ್ಶನವೇ ಸಾಕ್ಷಿ. ಅರ್ಜುನ ಭಕ್ತಿಯಿಂದ ಸಲ್ಲಿಸಿದ ಪೂಜೆ ಕಿರಾತನ ರೂಪದಲ್ಲಿದ್ದ ಶಿವನನ್ನು ತಲುಪಿದಂತೆ ನಾವು ಮಾಡಿದ ಅಭಿಷೇಕ ಪರಚೈತನ್ಯಕ್ಕೆ ತಲುಪಿ ಅವನ ಕರುಣೆ ನಮ್ಮೆಲ್ಲರನ್ನೂ ರಕ್ಷಿಸಲಿ ಎಂದು ಆಶಿಸಿದರು.

ಸವದತ್ತಿಯ ಬ್ರಹ್ಮಾನಂದ ಆಶ್ರಮದ ಶ್ರೀ ಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದರು. ವಿವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ ಟಿ.ಜಿ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ರಮಣ ಭಟ್ ಮುಂಬೈ, ಮನೋರಂಜಿನಿ, ಗೋಕರ್ಣ ಉಪಾಧಿವಂತ ಮಂಡಲದ ಕಾರ್ಯದರ್ಶಿ ಬಾಲಚಂದ್ರ ಜಂಬೆ, ಪರಮೇಶ್ವರ ಮಾರ್ಕಂಡೆ, ಶ್ರೀಮಠದ ಆಡಳಿತ ಖಂಡದ ಸಂಯೋಜಕ ಹಾರಕೆರೆ ನಾರಾಯಣ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ ಕುದುಪುಲ, ಮಂಡಲ ಗುರಿಕ್ಕಾರ ಬಾಲ್ಯ ಶಂಕರ ಭಟ್, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು.ಗೋಕರ್ಣ ಮಂಡಲದ ವಿವಿಧೆಡೆಗಳಿಂದ ಆಗಮಿಸಿದ್ದ 181 ರುದ್ರಪಾಠಕರು ತಲಾ 11 ಬಾರಿ ರುದ್ರಪಠಣ ಮಾಡುವ ಮೂಲಕ ಶ್ರೀ ಮಲ್ಲಿಕಾರ್ಜುನನಿಗೆ ಸೇವೆ ಸಮರ್ಪಿಸಿದರು.

Share this article