ಕರಾವಳಿ ಜಿಲ್ಲೆಗಳ ಎಲ್ಲಾ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ 100 ಕೋಟಿ ರು.ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ.
ಉಡುಪಿ: ಕರಾವಳಿ ಜಿಲ್ಲೆಗಳ ಎಲ್ಲಾ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ 100 ಕೋಟಿ ರು.ಗಳ ಕಾಮಗಾರಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಎಲ್ಲಾ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಇಲ್ಲಿನ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿ. ನಿರ್ಮಿಸಿದ ಪ್ರಯಾಣಿಕರ ಸೌಲಭ್ಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉಡುಪಿ ರೈಲು ನಿಲ್ದಾಣದ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಡೇರಿದೆ. ಸುಮಾರು 2.40 ಕೋಟಿ ರು. ವೆಚ್ಚದಲ್ಲಿ ಪ್ರಯಾಣಿಕರ ಬೇಡಿಕೆಯ ಸೌಲಭ್ಯಗಳನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಒದಗಿಸಲಾಗಿದೆ. ಅಮೃತ ಭಾರತ ಯೋಜನೆಯಡಿ ಪ್ಲಾಟ್ ಫಾರ್ಮ್ 2 ಅನ್ನು 2.6 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹಿರಿಯ ನಾಗರಿಕರ ಅನುಕೂಲಕ್ಕಾಗಿ 3 ಲಿಫ್ಟ್ ಗಳನ್ನು ಅಳವಡಿಸಲಾಗುವುದು. ಬಾರಕೂರು ಮತ್ತು ಮುಲ್ಕಿ ರೈಲ್ವೆ ನಿಲ್ದಾಣಗಳ ಪ್ಲಾಟ್ ಫಾರ್ಮ್‌ಗಳನ್ನು 4.28 ಕೋಟಿ ರು. ವೆಚ್ಚದಲ್ಲಿಅಭಿವೃದ್ಧಿ ಪಡಿಸಲಾಗುವುದು, ಉಡುಪಿ ರೈಲು ನಿಲ್ದಾಣಕ್ಕೆ ಶ್ರೀಕೃಷ್ಣ ರೈಲು ನಿಲ್ದಾಣ ಎಂದು ಹೆಸರಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ಮಂಗಳೂರಿನಿಂದ ಕಾರವಾರದವರೆಗೆ ದ್ವಿಪಥ ರೈಲ್ವೆ ಹಳಿಗಳು ಈಗಿನ ಅವಶ್ಯಕತೆಯಾಗಿದ್ದು, ಇದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸಚಿವರಿಗೆ ಸಲ್ಲಿಸಲಾಗುವುದು. ಇದರ ಜೊತೆಗೆ ಮಡಗಾಂವ್ - ಮಂಗಳೂರು ವಂದೇ ಭಾರತ್ ರೈಲನ್ನು ಮುಂಬೈವರೆಗೆ ಮತ್ತು ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಣೆಗೂ ಕೊಂಕಣ ರೈಲ್ವೆಯೊಂದಿಗೆ ಸಮಾಲೋಚಿಸಿ ಅಡಚಣೆಗಳನ್ನು ನಿವಾರಿಸಲಾಗುತ್ತದೆ ಎಂದರು.
ಶಾಸಕರಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕೊಂಕಣ ರೈಲ್ವೆ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಕಾರವಾರ ವಲಯ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.