ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜನಪ್ರಿಯತೆಗೆ ಸರಳ ಮಾರ್ಗವಿದೆ, ಆದರೆ ಸಾಧನೆಗಲ್ಲ. ಸಾಧನೆ ಸತತ ಪ್ರಯತ್ನದ ಫಲ ಎಂದು ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದ್ದಾರೆ.ಆಳ್ವಾಸ್ ಪದವಿಪೂರ್ವಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಡುಬಿದಿರೆಯ ಭಾರತ್ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಮ್ಮನ್ನು ಕರೆಯುತ್ತಿರುವ ಜಗತ್ತಿಗೆ ತಯಾರಾಗಿ, ಬರೀ ಪರೀಕ್ಷೆಗಳಿಗಲ್ಲ. ಶಿಕ್ಷಣದ ಪ್ರತಿ ಹಂತವೂ ಪ್ರಮುಖವಾದರೂ, ಶಿಕ್ಷಣ ಮುಗಿಸಿ ನಾವು ಸಾಗುವ ವೃತ್ತಿಕ್ಷೇತ್ರದಲ್ಲಿನ ನಮ್ಮ ಕ್ಷಮತೆ ನಮ್ಮಯಶಸ್ಸನ್ನು ನಿರ್ಧರಿಸುತ್ತದೆ. ಹಾಗಾಗಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂತುಎಂದಾಗ ಹೆಚ್ಚಿನ ಆತ್ಮವಿಶ್ವಾಸವೂ ಬೇಡ, ಕಡಿಮೆ ಬಂತೆಂದು ಕುಗ್ಗುವಿಕೆಯು ಸಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಚರ‍್ಯಡಾ. ಕುರಿಯನ್ ಮಾತನಾಡಿ, ಬದುಕಿನಲಿ ಸ್ವಯಂ ನಿಯಂತ್ರಣವೆಂಬುದು ಮುಖ್ಯ.ಯಾವ ವ್ಯಕ್ತಿ ಸ್ವಯಂ ನಿಯಂತ್ರಣ ಸಾಧಿಸುತ್ತಾನೋ ಅವನು ಬದುಕಿನ ಸಫಲತೆಯ ಮಾರ್ಗದಲ್ಲಿ ಸಾಗಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್, ಶಿಕ್ಷಣ ಸಂಸ್ಥೆ ಕಲಿಸಿದ ಪಠ್ಯವನ್ನು ನಾವು ಮರೆಯಬಹುದು, ಆದರೆ ಶಿಕ್ಷಣದ ಹಂತದಲ್ಲಿ ಕಲಿತ ಜೀವನ ಪಾಠ ನಮ್ಮನ್ನು ಯಶಸ್ಸಿನೆಡೆಗೆ ಒಯ್ಯಬಲ್ಲದು ಎಂದರು.
ಅಜಿತ್ ಹನಮಕ್ಕನವರ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಾಂಸ್ಕೃತಿಕ, ಕ್ರೀಡೆ ಹಾಗೂ ಶೈಕ್ಷಣಿಕ ವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಳ್ವಾಸ್ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಪ.ಪೂ.ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿಪಿ.ಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಪದವಿ ಪೂರ್ವ ವಿದ್ಯಾರ್ಥಿಗಳು, ಉಪನ್ಯಾಸಕರು, ಇದ್ದರು.
ಪದವಿ ಪೂರ್ವ ವಿಭಾಗದ ಕನ್ನಡ ಉಪನ್ಯಾಸಕ ಟಿ. ಎನ್. ಖಂಡಿಗೆನಿರೂಪಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಶಾಲೆಟ್ ಮೊನಿಸ್ ಸ್ವಾಗತಿಸಿದರು. ಉಪನ್ಯಾಸಕಿ ರುಚಿಕಾ ವಂದಿಸಿದರು.