ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜಿನ (ಎಎಸ್‌ಎಂ) ಸುವರ್ಣ ಮಹೋತ್ಸವ ಸಂಭ್ರಮ ಸೆ. 21 ಮತ್ತು 22 ರಂದು ಕಾಲೇಜಿನ ತೊಗರಿ ವೀರಪ್ಪನವರ ದತ್ತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀವಿ ಸಂಘದ ಖಜಾಂಚಿ ಬೈಲುವದ್ದಿಗೇರಿ ಎರಿಸ್ವಾಮಿ ಹಾಗೂ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ವಿ.ಎಸ್.ಮರಿದೇವಯ್ಯ ತಿಳಿಸಿದರು.
ಎಎಸ್‌ಎಂ ಕಾಲೇಜಿನ ವಿದ್ಯಾರ್ಥಿಗಳು ಪ್ರತಿವರ್ಷ ವಿಶ್ವವಿದ್ಯಾಲಯದ ರ್ಯಾಂಕ್‌ಗಳನ್ನು ಪಡೆಯುತ್ತಿದ್ದು, ಕಳೆದ ಐದು ವರ್ಷಗಳಲ್ಲಿ 69 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಲೇ ಬರಲಾಗಿದೆ. ವೀವಿ ಸಂಘದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದ ಐದು ದಶಕಗಳ ಸಾರ್ಥಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸುವರ್ಣ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಎಮ್ಮಿಗನೂರು ಗುರುಮಹಾಂತರ ಸಂಸ್ಥಾನಮಠದ ಶ್ರೀ ಗುರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಸಂಸದ ಈ.ತುಕಾರಾಂ ಉದ್ಘಾಟಿಸುವರು. ವೀವಿ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ್ ವಹಿಸುವರು. ವಿಜಯಪುರ ಅಕ್ಕಮಹಾದೇವಿ ವಿವಿ ಕುಲಪತಿ ಪ್ರೊ. ವಿಜಯಾ ಬಿ.ಕೋರಿಶೆಟ್ಟಿ, ಬೆಂಗಳೂರು ಜಯದೇವ ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುದ್ರಿ, ಮೇಯರ್ ಪೂಜಾರಿ ಗಾದೆಪ್ಪ, ಶಾಸಕ ವೈ.ಎಂ. ಸತೀಶ್ ಮತ್ತಿತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವರು.ಅಲ್ಲಂ ವೀರಭದ್ರಪ್ಪ ಮತ್ತು ಅಲ್ಲಂ ಸುನಂದಾ ವೀರಭದ್ರಪ್ಪನವರು ಸುವರ್ಣಸಿರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ವಿಶ್ರಾಂತ ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್ಪಿ ಡಾ. ಸುಮನ್ ಡಿ.ಪನ್ನೇಕರ್, ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹಾಗೂ ಉದ್ಯಮಿ ಲಕ್ಷ್ಮಿ ಅರುಣಾ ಭಾಗವಹಿಸುವರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ 6.30ರಿಂದ ಬೆಂಗಳೂರಿನ ರಾಮಚಂದ್ರ ಜಿ. ಹಡಪದ್ ಕಲಾ ತಂಡದಿಂದ ಗಾಯನಸುಧೆ ಜರುಗಲಿದೆ ಎಂದು ವಿವರಿಸಿದರು.