ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ ಆಕಾಂಕ್ಷಿ: ವಿನಯ್‌

KannadaprabhaNewsNetwork |  
Published : Jan 05, 2024, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗ ಲೋಕಸಭೆಯಿಂದ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಪುತ್ರ ವಿನಯ್‌ ತಿಮ್ಮಾಪುರ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವುದಾಗಿ ಹೇಳಿದ್ದಾರೆ. ಅಲ್ಲದೇ ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಮೀಸಲು ಕ್ಷೇತ್ರ, ಕಾಂಗ್ರೆಸ್‌ನಿಂದ ಸ್ಪರ್ಧಿಸಲು ತೀವ್ರ ಪೈಪೋಟಿ ಏರ್ಪಟ್ಟಿದ್ದು, ಏತನ್ಮಧ್ಯೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ಪುತ್ರ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪೂರ ಕೂಡ ಉತ್ಸುಕರಾಗಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿವತಿಯಿಂದ ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಯುವ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾವೋರ್ವ ಆಕಾಂಕ್ಷಿಯೆಂಬುದು ಸ್ಪಷ್ಟಪಡಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಆದರೆ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತದೋ ಅವರ ಪರವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಿಯೂ ಗೊಂದಲ ಮೂಡುವ ವಾತಾವರಣ ಸೃಷ್ಟಿಸಬಾರದೆಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ಸಮೀಕ್ಷೆ ನಡೆಸಿ ತಳಮಟ್ಟದಿಂದ ಯೂತ್ ಕಾಂಗ್ರೆಸ್‍ ಅನ್ನು ಸಂಘಟಿಸಬೇಕಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ನೀಡಿರುವುದರಿಂದ ಎಲ್ಲರೂ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಜಾತಿ ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತಿರುವ ಕೋಮುವಾದಿ ಬಿಜೆಪಿಯಿಂದ ದೇಶದಲ್ಲಿ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜ್ಯದ ಜನತೆ ತಲೆದೂಗುತ್ತಿದ್ದಾರೆ. ಗ್ಯಾರಂಟಿಗಳು ಜನರ ಬದುಕಿಗೆ ಹೊಸ ಭರವಸೆ ನೀಡಿವೆ. ಸರ್ಕಾರದ ಆಶಯಗಳ ಬರೀ ಬಾಯಲ್ಲಿ ಮಾತಾಡಿಕೊಂಡು ಕುಳಿತರೆ ಸಾಲದು. ಮನೆ, ಮನೆಗಳಿಗೆ ಮುಟ್ಟಿಸುವ ಕೆಲಸವಾಗಬೇಕು. ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಪಕ್ಷ ಸಂಘಟನೆ ಚುರುಕುಗೊಳಿಸಬೇಕೆಂದು ವಿನಯ್ ತಿಮ್ಮಾಪೂರ ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ, 40% ಕಮಿಷನ್ ಸರ್ಕಾರವನ್ನು ರಾಜ್ಯದ ಜನ ತೊಲಗಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಸಿದ್ದರಾಮಯ್ಯನವರು ಪ್ರಣಾಳಿಕೆಯಲ್ಲಿ ಹೊರಡಿಸಿದಂತ 5 ಗ್ಯಾರೆಂಟಿಗಳನ್ನು ನೀಡಿದ್ದಾರೆ. ಇದರಿಂದ ಬಡವರಿಗೆ ದೀನ ದಲಿತರಿಗೆ ಅನುಕೂಲವಾಗಿದೆ. ಇನ್ನೇನು ಮೂರ್ನಾಲ್ಕು ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಎದುರಾಗಲಿದೆ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಪ್ರತಿ ಮನೆಗೆ ತಲುಪಿದೆಯೋ ಇಲ್ಲವೋ ಎನ್ನುವುದನ್ನು ವಿಚಾರಿಸಿ ಪಕ್ಷದ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಜವಾಬ್ದಾರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರುಗಳ ಮೇಲಿದೆ ಎಂದು ಹೇಳಿದರು.

ಸೇವಾದಳದ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಸೇವಾದಳ ಅಸ್ತಿತ್ವದಲ್ಲಿರಬೇಕು. ನಮಗೆ ಬೇಕಿರುವುದು ರಾಮ ರಾಜ್ಯವೇ ಹೊರತು ರಾಮಮಂದಿರವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರೆಂಟಿಯಿಂದ ಜನ ಸುಖವಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ರಾಹುಲ್‍ ಗಾಂಧಿ ಅವರ ಕೈಬಲಪಡಿಸುವಂತೆ ವಿನಂತಿಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಸೀಂ ಮಾತನಾಡಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು. ವಾರ್ಡ್, ಬೂತ್‍ಗಳಲ್ಲಿ ಕಾರ್ಯಕರ್ತರು ಪಕ್ಷದ ಯೋಜನೆಗಳ ಬಗ್ಗೆ ತಿಳಿಸಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು ತಂದು ಕೊಡುವ ಹೊಣೆಗಾರಿಕೆ ನಿಮ್ಮ ಹೆಗಲ ಮೇಲಿದೆ ಎಂದು ತಿಳಿಸಿದರು. ಯೂತ್ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೇಸ್ವಾಮಿ, ಅಫೀಜ್, ಕಾಂಗ್ರೆಸ್ ಮೀನುಗಾರಿಕೆ ವಿಭಾಗದ ಅಧ್ಯಕ್ಷ ಶಶಿಕಿರಣ್ ವೇದಿಕೆಯಲ್ಲಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ