ಪ್ರಚೋದನಕಾರಿ ಘೋಷಣೆಯಿಂದ ಹಲ್ಲೆ ಪ್ರಕರಣ: ಪೊಲೀಸ್ ಆಯುಕ್ತ

KannadaprabhaNewsNetwork | Published : Jun 12, 2024 12:36 AM

ಸಾರಾಂಶ

ಮೂರು ತಂಡಗಳನ್ನು ರಚಿಸಲಾಗಿದೆ. ಇನ್ನೊಂದೆಡೆ ಪ್ರಚೋದನಕಾರಿ ಘೋಷಣೆ ಕೂಗಿದ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅನುಪಮ್‌ ಅಗರ್ವಾಲ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲದ ಬೊಳಿಯಾರು ಎಂಬಲ್ಲಿ ಚೂರಿ ಇರಿತ ಪ್ರಕರಣ ನಡೆಯಲು ಮೆರವಣಿಗೆಯಲ್ಲಿ ಭಾರತ್‌ ಮಾತಾ ಕೀ ಜೈ ಎಂದದ್ದು ಕಾರಣವಲ್ಲ. ಬದಲಾಗಿ ಪ್ರಚೋದನಕಾರಿ ಘೋಷಣೆ ಕೂಗಿದ್ದು ಮುಖ್ಯ ಪ್ರೇರಕವಾಗಿತ್ತು. ಈ ಹಿನ್ನೆಲೆಯಲ್ಲಿ ಇತ್ತಂಡಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್‌ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.9ರಂದು ಸಂಜೆ ವಿಜಯೋತ್ಸವ ಮೆರವಣಿಗೆಯಲ್ಲಿ 30-40 ಮಂದಿ ಇದ್ದರು. ಮಾರ್ಗಮಧ್ಯೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಅದಾದ ಮೇಲೆ ಒಂದು ಬೈಕ್‌ನಲ್ಲಿ ಮೂವರು ಯುವಕರು ವಾಪಸ್‌ ತೆರಳಿ ಘೋಷಣೆ ಕೂಗಿದ್ದಾರೆ. ಆಗ ಅಲ್ಲಿದ್ದ 20 ಮಂದಿ ಸೇರಿ, ಕೆಲವರು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬಿಬ್ಬರು ಚೂರಿಯಿಂದ ಇರಿದಿದ್ದು, ಇದರಿಂದ ಒಬ್ಬನ ಹೊಟ್ಟೆಗೆ, ಇನ್ನೊಬ್ಬನ ಬೆನ್ನಿಗೆ ಗಾಯವಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಕರಣದ ಬಗ್ಗೆ ಮಸೀದಿಯವರು ಕೂಡ ದೂರು ನೀಡಿದ್ದರು. ತನಿಖೆ ನಡೆಸಿದಾಗ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿರುವುದು ಗೊತ್ತಾಗಿದೆ. ‘ಪಾಕಿಸ್ತಾನದ ಕುನ್ನಿಗಳೇ, ಮೋದಿ ಬಂದರೆ ಹೆದರುವಿರಾ’ ಎಂಬಿತ್ಯಾದಿ ಘೋಷಣೆ ಕೂಗಿದ್ದಾರೆ ಎಂದು ಕಮಿಷನರ್‌ ವಿವರಿಸಿದರು.

ಮೂರು ತಂಡ ರಚನೆ: ಹಲ್ಲೆ ನಡೆಸಿದವರಲ್ಲಿ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಚೂರಿಯಿಂದ ಹಲ್ಲೆ ನಡೆಸಿದವನು ರೌಡಿ ಶೀಟರ್‌ ಆಗಿದ್ದು, ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ ಇನ್ನಷ್ಟು ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಇನ್ನೊಂದೆಡೆ ಪ್ರಚೋದನಕಾರಿ ಘೋಷಣೆ ಕೂಗಿದ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅನುಪಮ್‌ ಅಗರ್ವಾಲ್‌ ತಿಳಿಸಿದರು.

ಡಿಸಿಪಿ ಸಿದ್ಧಾರ್ಥ್‌ ಗೋಯೆಲ್‌, ಎಸಿಪಿ ಧನ್ಯಾ ನಾಯಕ್‌ ಇದ್ದರು.ಬಾಕ್ಸ್‌

ಎಲ್ಲ ಠಾಣೆಗಳಲ್ಲಿ ಶಾಂತಿ ಸಭೆ

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಮತೀಯ ಸಂಘರ್ಷಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗುವುದು. ಎಲ್ಲ ಧರ್ಮದ ಮುಖಂಡರು, ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಲಿದ್ದೇವೆ. ಜತೆಗೆ ದ್ವೇಷ ಹರಡುವ ಸೋಶಿಯಲ್‌ ಮೀಡಿಯಾಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಅನುಪಮ್ ಅಗರ್ವಾಲ್‌ ತಿಳಿಸಿದರು.ಫೋಟೊ

11ಪೊಲೀಸ್‌

ಫೋಟೊಸ್‌ಗೆ ಬರಲಿದೆ

Share this article