)
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಂಗೋಂದಿ ಗ್ರಾಮದ ಸೊಸೈಟಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ 2025ರ ಫೆಬ್ರವರಿ 4ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರೋಪಿತನಾದ ಸದಾಶಿವ ಗುರಪ್ಪ ಮೇಟಿ ಎಂಬಾತ ತನ್ನ ಪತ್ನಿ ಜಗಳ ಮಾಡಿಕೊಂಡು ತವರು ಮನೆಗೆ ಹೋಗಲು ಪಿರ್ಯಾದಿ ಹಾಗೂ ಪಿರ್ಯಾದಿಯ ಪತ್ನಿಯೇ ಕಾರಣವೆಂದು ಆರೋಪಿಸಿ ಅವರೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಿದ್ದ. ಬಳಿಕ ಪಿರ್ಯಾದಿಗೆ ಕಲ್ಲಿನಿಂದ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಹಲ್ಲೆ ನಡೆಸಿದ್ದ. ಈ ವೇಳೆ ಪಿರ್ಯಾದಿಯನ್ನು ಬಿಡಿಸಲು ಬಂದ ಅವರ ಪತ್ನಿ ನೀಲವ್ವ ತಲೆ, ಕಣ್ಣು ಹಾಗೂ ಬಲಗಡೆಯ ಗದ್ದಕ್ಕೆ ಕಲ್ಲಿನಿಂದ ಹೊಡೆದು ಗಂಭೀರ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ್ದ. ಈ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಅಂದಿನ ತನಿಖಾಧಿಕಾರಿ ಎಸ್.ಎನ್. ಸಂಗಳದ ಅವರು ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂದೀಪ ಅಪ್ಪಾಸಾಹೇಬ ನಾಯಕ ಅವರು ನ.16ರಂದು ಆರೋಪಿತನಿಗೆ ಎರಡು ವರ್ಷಗಳ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಾರದಾ ಬದಾಮಿ ವಾದ ಮಂಡಿಸಿದ್ದರು.