)
ಕನ್ನಡಪ್ರಭ ವಾರ್ತೆ ಬೆಂಗಳೂರುನೂಡಲ್ಸ್‌ನಲ್ಲಿ ಹೆಚ್ಚು ಖಾರ ಇದೆ ಎಂದು ಆರೋಪಿಸಿ ಮದ್ಯದ ಅಮಲಿನಲ್ಲಿ ನಾಲ್ವರ ಗುಂಪು ಹೋಟೆಲ್ ಮಾಲೀಕ ಹಾಗೂ ಇತರರ ಮೇಲೆ ಹಲ್ಲೆ ನಡೆಸಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ತೋಗೂರಿನಲ್ಲಿ ನಡೆದಿದೆ.
ದೀಪಕ್ ತಾಪಾ ದೊಡ್ಡ ತೋಗೂರಿನಲ್ಲಿ ಫಾಸ್ಟ್ ಪುಡ್ ಹೋಟೆಲ್ ಇಟ್ಟುಕೊಂಡಿದ್ದು, ಗುರುವಾರ ರಾತ್ರಿ 10:30ರ ಸುಮಾರಿಗೆ ಬಂದ ಆರೋಪಿಗಳು ನೂಡಲ್ಸ್ ಆರ್ಡರ್ ಮಾಡಿದ್ದಾರೆ, ಆದರೆ ನೂಡಲ್ಸ್‌ನಲ್ಲಿ ಹೆಚ್ಚು ಖಾರ ಇದೆ ಎಂದು ಆರೋಪಿಸಿ ದೀಪಕ್ ತಾಪಾನನ್ನು ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು, ಕೈಗಳಿಂದ ಹಲ್ಲೆ ನಡೆಸಿದ್ದಾರೆ. ನೂಡಲ್ಸ್ ಅನ್ನು ಬಾಯಿಗೆ ತುರುಕಿ ತಿನ್ನುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಈತನ ನೆರವಿಗೆ ಬಂದ ಆತನ ಪತ್ನಿ ಮತ್ತು ಯುವಕನ ಮೇಲೆಯೂ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.