ವೈದ್ಯೆ ಸಿಬ್ಬಂದಿಯ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ

KannadaprabhaNewsNetwork |  
Published : Nov 28, 2024, 12:34 AM IST
ಆಸ್ಪತ್ರೆ | Kannada Prabha

ಸಾರಾಂಶ

ಕುಪಿತರಾದ ಮಕ್ರಾಮ್ ಪಾಷ ಹಾಗೂ ಸಹಚರರು, ನೀವು ಅನಗತ್ಯವಾಗಿ ಚಿಕಿತ್ಸೆ ವಿಳಂಬ ಮಾಡಿ ರೋಗಿಯನ್ನು ಸಾಯಿಸಲು ಯತ್ನಿಸುತ್ತಿದ್ದೀರಿ. ನನಗೆ ಶಾಸಕ, ಸಚಿವರು, ಸಂಘ, ಸಂಸ್ಥೆಗಳ ಬಲವಿದೆ ಎಂದು ಬೆದರಿಸಿ ಗುಂಪು ಕೈಗಳಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದ ವೈದ್ಯೆ ಡಾ.ದ್ರಾಕ್ಷಾಯಣಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ನಡೆಸಿದಲ್ಲದೇ ಡಿ.ಗ್ರೂಪ್ ನೌಕರನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ನಗರದ ಸಾರ್ವಜನಿಕ ಆಸ್ಪತ್ರೆಗೆ ಹೊಟ್ಟೆ ನೋವೆಂದು ಚಿಕಿತ್ಸೆಗೆ ದಾಖಲಾಗಿದ್ದ ಅಸ್ಮಾ ಎಂಬುವವರಿಗೆ ಇಲ್ಲಿ ಚಿಕಿತ್ಸೆಯನ್ನು ಕಲ್ಪಿಸಿದ ನಂತರವೂ ರೋಗಿ ಅಸ್ಮಾರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯೆ ಡಾ. ದ್ರಾಕ್ಷಾಯಣಿ ಬುಧವಾರ ಸಂಜೆ ೪ರ ಸುಮಾರಿನಲ್ಲಿ ಸೂಚಿಸಿದ್ದು, ಅದರಂತೆ ಆ್ಯಂಬುಲೆನ್ಸ್ ಗೆ ಕರೆ ಮಾಡಿದ ರೋಗಿಯ ಸಂಬಂಧಿ ಸೈಯದ್ ಮಕ್ರಾಮ್ ಪಾಷರಿಗೆ ಅರ್ಧ ತಾಸಿನೊಳಗೆ ಬರುವುದಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ತಿಳಿಸಿದ್ದು, ಮತ್ತೆ ವೈದ್ಯರ ಬಳಿಗೆ ಬಂದ ಮಕ್ರಾಮ್ ಪಾಷ ನೀವು ಶಿಫಾರಸ್ಸು ಮಾಡಿ ಬೇಗನೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದು, ಕರ್ತವ್ಯ ನಿರತ ಆ್ಯಂಬುಲೆನ್ಸ್ ಸಿಬ್ಬಂದಿ ಬರುವುದು ಕೊಂಚ ತಡವಾಗುವುದರಿಂದ ಸಹಕರಿಸುವಂತೆ ವೈದ್ಯೆ ಡಾ. ದ್ರಾಕ್ಷಾಯಣಿ ಸೂಚಿಸಿದ್ದಾರೆ.

ಕುಪಿತರಾದ ಮಕ್ರಾಮ್ ಪಾಷ ಹಾಗೂ ಸಹಚರರು, ನೀವು ಅನಗತ್ಯವಾಗಿ ಚಿಕಿತ್ಸೆ ವಿಳಂಬ ಮಾಡಿ ರೋಗಿಯನ್ನು ಸಾಯಿಸಲು ಯತ್ನಿಸುತ್ತಿದ್ದೀರಿ. ನನಗೆ ಶಾಸಕ, ಸಚಿವರು, ಸಂಘ, ಸಂಸ್ಥೆಗಳ ಬಲವಿದೆ ಎಂದು ಬೆದರಿಸಿ ಗುಂಪು ಕೈಗಳಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವೈದ್ಯೆ ಡಾ. ದ್ರಾಕ್ಷಾಯಣಿ ವಿವರಿಸಿದ್ದಾರೆ.

ಘಟನೆಗೆ ಕಾರಣವಾದ ವ್ಯಕ್ತಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದು ಅವರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಬುಧವಾರ ನಡೆದ ಈ ಘಟನೆಗಳನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕೆಲವರನ್ನು ಡಿ.ಗ್ರೂಪ್ ನೌಕರ ಶ್ರೀನಿವಾಸ್ ವಿಡಿಯೋ ಚಿತ್ರೀಕರಿಸಬೇಡಿ ಎಂದು ತಿಳಿ ಹೇಳಿದ್ದರಿಂದ ಕುಪಿತರಾದ ಗುಂಪು ಅವಾಚ್ಯವಾಗಿ ನಿಂದಿಸಿ, ಆತನ ಕುತ್ತಿಗೆ, ಎದೆ, ಹೊಟ್ಟೆ, ಬೆನ್ನಿಗೆ ಗುದ್ದಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆಂದು ಡಿ.ಗ್ರೂಪ್ ನೌಕರ ಶ್ರೀನಿವಾಸ್ ದೂರಿದ್ದು, ಈ ಘಟನೆಗಳ ಕುರಿತು ಆಸ್ಪತ್ರೆಯ ಸಿಸಿ ಕ್ಯಾಮೆರಾ ಮಾಹಿತಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ